ಮಾಧ್ಯಮ ಲೋಕ-೦೨
ರೈತರ ಪ್ರತಿಭಟನೆ ಮತ್ತು ರಾಷ್ಟ್ರೀಯ ಮಾಧ್ಯಮಗಳು
-ಡಾ.ಅಮ್ಮಸಂದ್ರ ಸುರೇಶ್
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ ರೈತರು “ಮಾಧ್ಯಮಗಳು ನಮ್ಮ ನಂಬಿಕೆಯನ್ನು ಕಳೆದುಕೊಂಡಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ನಮ್ಮ ಪ್ರತಿಭಟನೆಯನ್ನು ಸರಿಯಾಗಿ ವರದಿ ಮಾಡುವಲ್ಲಿ ವಿಫಲವಾಗಿವೆ ಎಂಬುದು ರೈತರ ಈ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಮಾಧ್ಯಮಗಳ ಮೇಲೆ ರೈತರು ನೇರವಾಗಿ ವಾಗ್ದಾಳಿ ಮಾಡಿದ್ದಾರೆ. “ರಾಷ್ಟ್ರೀಯ ಮಾಧ್ಯಮಗಳು ನಮ್ಮನ್ನು ಏಕೆ ಗಮನಿಸುತ್ತಿಲ್ಲ? ರಸ್ತೆ ತಡೆಗಳು ಅವರಿಗೆ ಕಾಣಿಸುತ್ತಿಲ್ಲವೆ? ನಮ್ಮ ಘೋಷಣೆಗಳು ಅವರಿಗೆ ಕೇಳುತ್ತಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಕೆಲವು ಟಿ.ವಿ. ಮಾಧ್ಯಮಗಳ ವರದಿಗಾರರ ಮೇಲೆ ಘೋಷಣೆಗಳನ್ನು ಕೂಗಿರುವ ಜೊತೆಗೆ ಕೆಲವು ವರದಿಗಾರರ ಮೇಲೆ ನೀರನ್ನು ಕೂಡ ಎರಚಿ ಪ್ರತಿಭಟಿಸಿದ್ದಾರೆ. ಕೆಲವು ಮಾಧ್ಯಮ ಸಂಸ್ಥೆಗಳ ವರದಿಗಾರರಿಗಂತೂ ಸಂದರ್ಶನ ನೀಡಲು ಕೂಡ ರೈತರು ನಿರಾಕರಿಸಿದ ಘಟನೆಗಳು ಕೂಡ ನಡೆದಿವೆ. ಇದಕ್ಕೆ ಮೂಲ ಕಾರಣ ಕೆಲವು ಟಿ.ವಿ.ವಾಹಿನಿಗಳು ರೈತರನ್ನು ‘ಖಲಿಸ್ಥಾನಿಗಳು’, ‘ಉಗ್ರಗಾಮಿಗಳು’ ಎಂದು ಕರೆದಿದ್ದು. ಇದಕ್ಕೆ ಪ್ರತಿಕ್ರಿಯಿಸಿರುವ ರೈತರು ನಮ್ಮನ್ನು ‘ಖಲಿಸ್ತಾನಿಗಳು, ಎಂದು ಕರೆಯುವವರು ಭಾರತೀಯರೇ ಅಲ್ಲ ಎಂದಿದ್ದಾರೆ. ನೀವು ಏನು ನೋಡುತ್ತಿದ್ದೀರೋ ಅದನ್ನು ವರದಿ ಮಾಡಿ ಎಂದಷ್ಟೇ ನಾವು ಬಯಸುತ್ತೇವಿ ಎಂದು ರೈತರು ಮಾಧ್ಯಮಗಳನ್ನು ಆಗ್ರಹಿಸಿದ್ದಾರೆ.
ರೈತರ ಈ ಆಕ್ರೋಶ ಇದ್ದಕ್ಕಿದ್ದಂತೆ ಬುಗಿಲೆದ್ದಿದ್ದಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಮಾಧ್ಯಮಗಳಲ್ಲಿ ಏನು ಬರುತ್ತಿದೆ? ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಕೆಲವು ಮಾಧ್ಯಮಗಳು ರೈತರ ಪ್ರತಿಭಟನೆಯ ವಿಷಯವನ್ನು ಹೊರತುಪಡಿಸಿ ಅವರ ವೇಷ-ಭೂಷಣಗಳು ಮತ್ತು ಊಟದ ವ್ಯವಸ್ಥೆ ಹೇಗೆ ಆಗುತ್ತಿದೆ? ರೈತರಿಗೆ ಆರ್ಥಿಕ ನೆರವು ಎಲ್ಲಿಂದ ಬರುತ್ತಿದೆ? ಎನ್ನುವುದರ ಕುರಿತು ಸಂದೇಹಗಳನ್ನು ವ್ಯಕ್ತಪಡಿಸಿರುವುದಲ್ಲದೆ ರೈತರು ಜೀನ್ಸ್ ಧರಿಸಿದ್ದಾರೆ, ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದಾರೆ ಎಂದೆಲ್ಲಾ ವರದಿ ಮಾಡಿವೆ. ನನ್ನ ಪ್ರಕಾರ ಕೆಲವು ಮಾಧ್ಯಮಗಳು ರೈತ ಸಮುದಾಯವನ್ನು ಗ್ರಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಅವುಗಳ ಪ್ರಕಾರ ರೈತರು ನಿರಕ್ಷರಕುಕ್ಷಿಗಳು, ಅವರಿಗೆ ಇಂಗ್ಲೀಷ್ ಮಾತನಾಡಲು ಬರುವುದಿಲ್ಲ. ಬರಿಗಾಲಿನಲ್ಲಿ ನಡೆಯುತ್ತಾರೆ, ಹರಿದ ಬಟ್ಟೆಗಳನ್ನು ಧರಿಸುತ್ತಾರೆ. ಎಂತಹ ವಿಚಿತ್ರ ಪರಿಸ್ಥಿತಿಗೆ ನಮ್ಮ ಮಾಧ್ಯಮಗಳು ಬಂದು ನಿಂತಿವೆ.
ಧರಣಿನಿರತರಲ್ಲಿ ಕೆಲವರು ಜೀನ್ಸ್ ಪ್ಯಾಂಟ್ ಹಾಕಿದ ಮಾತ್ರಕ್ಕೆ, ಇಂಗ್ಲೀಷಿನಲ್ಲಿ ಸುಲಲಿತವಾಗಿ ಮಾತನಾಡುತ್ತಿದ್ದ ಮಾತ್ರಕ್ಕೆ ಅವರು ರೈತರಲ್ಲ ಎಂಬ ತೀರ್ಮಾನಕ್ಕೆ ಬರುವುದು ಎಷ್ಟು ಸರಿ?. ರೈತ ಎಂದ ಮಾತ್ರಕ್ಕೆ ಯೋಗ್ಯವಾದ ಬಟ್ಟೆಗಳನ್ನು ಧರಿಸುವಂತಿಲ್ಲವೆ? ರೈತರು ಶ್ರಮಪಟ್ಟು ಶಿಕ್ಷಣ ಪಡಿದಿದ್ದಾರೆ, ಅಂತಹದ್ದರಲ್ಲಿ ಅವರು ಇಂಗ್ಲೀಷಿನಲ್ಲಿ ಮಾತನಾಡಿದರೆ ಸಂದೇಹ ಪಟ್ಟರೆ ಹೇಗೆ? ರೈತರ ಕುರಿತಾದ ಕೆಲವು ಮಾಧ್ಯಮಗಳ ನಿರೂಪಣೆಯೇ ಸರಿಯಿಲ್ಲ. ಈ ರೀತಿಯ ಮಾಧ್ಯಮಗಳ ತಪ್ಪು ಕಲ್ಪನೆಗಳಿಗೆ ಕಾರಣಗಳೇನು? ಎಂಬುದನ್ನು ವಿಶ್ಲೇಷಣೆ ಮಾಡಬೇಕಾದ ಸಂದರ್ಭವಿದು.
ಪ್ರತಿಭಟನೆಯಲ್ಲಿ ಪಾಲ್ಗೊಂಡವರನ್ನು ಯಾವುದೇ ಆಧಾರ ಮತ್ತು ಸಾಕ್ಷ್ಯಗಳಿಲ್ಲದೆ ಖಲಿಸ್ತಾನಿಗಳು ಹಾಗೂ ದೇಶ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟುವ ಕೆಲಸವನ್ನು ಕೆಲ ಮಾಧ್ಯಮಗಳು ಮಾಡುತ್ತಿವೆ ಎಂದು ಈಗಾಗಲೇ ಎಡಿಟರ್ಸ್ ಗಿಲ್ಡ್,, ಟ್ವಟರ್ ನಲ್ಲಿ ಬೇಸರ ವ್ಯಕ್ತಪಡಿಸಿದೆ. ಮುಂದುವರೆದು “ಇಂತಹ ವರದಿಗಾರಿಕೆ ಜವಾಬ್ದಾರಿಯುತ ಹಾಗೂ ನೈತಿಕ ಪತ್ರಿಕೋದ್ಯಮದ ಮೌಲ್ಯಗಳ ವಿರುದ್ದವಾಗಿದೆ” ಎಂದು ಹೇಳಿರುವ ಎಡಿಟರ್ಸ್ ಗಿಲ್ಡ್ ರೈತರ ಪ್ರತಿಭಟನೆಗಳ ಕುರಿತಂತೆ ಸಮತೋಲಿತ ಹಾಗೂ ನ್ಯಾಯೋಚಿತ ವರದಿಗಾರಿಕೆ ನಡೆಸುವಂತೆ ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ಸಲಹೆ ನೀಡಿದೆ.
ಮೂಲತಃ ಇಂತಹ ತಪ್ಪು ಕಲ್ಪನೆಗಳಿಗೆ ಕಾರಣಗಳನ್ನು ಹುಡುಕಲು ಹೊರಟಾಗ ನಮಗೆ ಅನೇಕ ವಿಷಯಗಳು ಗಮನಕ್ಕೆ ಬರುತ್ತವೆ. ಕೃಷಿ ಹಿನ್ನೆಲೆಯಿಂದ ಬಂದಿರುವ ಪತ್ರಕರ್ತರುಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕೃಷಿ, ರೈತ ಹಾಗೂ ಗ್ರಾಮೀಣ ಪ್ರದೇಶಗಳು ಕುರಿತು ವರದಿ ಮಾಡುವ ಹೆಚ್ಚಿನ ಪತ್ರಕರ್ತರುಗಳಿಗೆ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಮಾಧ್ಯಮಗಳ ವರದಿಗಾರರಿಗೆ ಇವುಗಳ ಗಂಧ ಗಾಳಿಯೇ ಇರುವುದಿಲ್ಲ. ಇವರಲ್ಲಿ ಹೆಚ್ಚಿನವರು ನಗರ ಪ್ರದೇಶಗಳಿಂದ, ಇಂಗ್ಲೀಷ್ ಶಾಲೆಗಳಿಂದ ಮತ್ತು ಉಳ್ಳವರು ಮನೆಗಳಿಂದ ಬಂದವರಾಗಿದ್ದಾರೆ. ಇಂತಹವರಿಗ ಕೃಷಿ ಕ್ಷೇತ್ರ ಸಮಸ್ಯೆಗಳು, ರೈತರ ಭವಣೆಗಳು, ಗ್ರಾಮೀಣರ ದುಃಖ-ದುಮ್ಮಾನಗಳ ಕಿಂಚಿತ್ತೂ ಪರಿಚಯವೇ ಇರುವುದಿಲ್ಲ. ಇಂತಹವರಿಂದ ಹೇಗೆ ಈ ಕ್ಷೆತ್ರಗಳ ಕುರಿತಾದ ಆಳವಾದ, ನಿಖರವಾದ, ವಸ್ತುನಿಷ್ಠವಾದ, ಪ್ರಾಯೋಗಿಕವಾದ ವರದಿಗಳನ್ನು ನಿರೀಕ್ಷಿಸಲು ಸಾಧ್ಯ?
ಭಾರತದಲ್ಲಿ ಕೆಲವೇ ಕೆಲವು ಮಾಧ್ಯಮಗಳು ಕೃಷಿ ಪತ್ರಕರ್ತರನ್ನು ನೇಮಿಸಿಕೊಂಡಿವೆ. ಆದರೆ ಇಂತಹ ಕೃಷಿ ಪತ್ರಕರ್ತುರುಗಳೆಲ್ಲ ಕೃಷಿ ಹಿನ್ನೆಲೆಯಿಂದ ಬಂದವರಲ್ಲ ಅಥವಾ ಕೃಷಿಯ ಕುರಿತು ಪ್ರಾಯೋಗಿಕ ಅನುಭವಗಳಿಂದ ಕೂಡಿದವರಲ್ಲ. ಕೃಷಿ ಪತ್ರಕರ್ತರಿಗೆ ಅಥವಾ ಕೃಷಿ ಹಾಗೂ ಗ್ರಾಮೀಣ ಕ್ಷೇತ್ರಗಳ ಕುರಿತು ವರದಿ ಮಾಡುವವರು ಆ ಹಿನ್ನೆಲೆಯಿಂದಲೇ ಬರಬೇಕೆಂದೇನೂ ಇಲ್ಲ, ಅಧ್ಯಯನ ಮಾಡಿದ್ದರೆ ಸಾಕು ಎಂದು ಅಭಿಪ್ರಾಯಪಡುವವರು ಇದ್ದಾರೆ. ಇದನ್ನು ತಪ್ಪು ಎಂದು ಹೇಳುವುದಿಲ್ಲ. ಬದಲಾಗಿ ಆ ಪರಿಸ್ಥಿತಿಯ ಹಿನ್ನೆಲೆಯಿಂದ ಬಂದವರಿಗೂ, ಆ ಭವಣೆ, ಸಮಸ್ಯೆಗಳ ಮಧ್ಯದಿಂದಲೇ ಬಂದವರಿಗೆ ಇರುವ ಜ್ಞಾನ ಮತ್ತು ಅನುಭವಗಳಿಗೂ, ಕೇವಲ ಓದಿನಿಂದ ಪಡೆದ ಜ್ಞಾನಕ್ಕೂ ಅಜಗಜಾಂತರ ವೆತ್ಯಾಸವಿದೆ ಎಂಬುದನ್ನು ಮರೆಯಬಾರದು.
ಪತ್ರಕರ್ತನಾದವನಿಗೆ ಎಲ್ಲಾ ವಿಷಯಗಳ, ಕ್ಷೇತ್ರಗಳ ಜ್ಞಾನ ಅವಶ್ಯಕ, ಎಂಬುದು ನಮ್ಮ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಒಂದು ರೀತಿಯಲ್ಲಿ ಇದು ನಿಜ. ಇಷ್ಟು ಜ್ಞಾನ ಸಾಮಾನ್ಯ ವರದಿಗಾರನಾಗುವವನಿಗೆ ಸಾಕು. ಆದರೆ ಕೃಷಿ, ವಿಜ್ಞಾನ, ವೈಧ್ಯಕೀಯ, ಅಭಿವೃದ್ದಿ ವಿಷಯಗಳನ್ನು ವರದಿ ಮಾಡುವ ವಿಶೇಷ ವರದಿಗಾರರಾಗುವವರಿಗೆ ಆಯಾ ವಿಷಯಗಳಲ್ಲಿ ಸಂಪೂರ್ಣವಾದ ತಿಳುವಳಿಕೆ ಇರಬೇಕಾದುದು ಅತ್ಯಾವಶ್ಯಕ. ಕೃಷಿ ಕ್ಷೇತ್ರಕ್ಕೇನೋ ಕೃಷಿ ಹಿನ್ನೆಲೆಯಿಂದ ಬಂದವರು ಹೆಚ್ಚು ಪರಿಣಾಮಕಾರಿಯಾಗಿ ಕೃಷಿ ವಿಷಯಗಳನ್ನು ವರದಿ ಮಾಡುತ್ತಾರೆ ಎನ್ನುವುದಾದರೆ, ವಿಜ್ಞಾನ ಮತ್ತು ವೈಧ್ಯಕೀಯ ವರದಿಗಾರರಿಗೆ ಯಾವ ಹಿನ್ನೆಲೆ ಇರುತ್ತದೆ? ಎಂಬ ಪ್ರಶ್ನೆ ಎದುರಾಗುವುದು ಸಹಜ. ವಿಜ್ಞಾನ ಮತ್ತು ವೈಧ್ಯಕೀಯ ಎರಡೂ ವಿಷಯಗಳು ನಮಗೆ ಓದಿನ ಜ್ಞಾನದಿಂದ ಬರುವಂತಹವುಗಳು, ಆದರೆ ಕೃಷಿಕನನ್ನು ಯಾವುದೇ ಕಾಲೇಜು ಸೃಷ್ಟಿಸಲು ಸಾಧ್ಯವಿಲ್ಲ. ಕೃಷಿ ಅನುಭವ ಮತ್ತು ಪ್ರಾಯೋಗಿಕ ಜ್ಞಾನದಿಂದ ಬರುವಂತಹದ್ದು. ಅದರೆ ಕೃಷಿಯಲ್ಲಿ ವೈಜ್ಞಾನಿಕ ಕ್ರಮಗಳ ಅಳವಡಿಕೆ ಪ್ರಗತಿ ಮತ್ತು ಅಭಿವೃದ್ದಿಗೆ ಮಾತ್ರ ಓದಿನ ಅಥವಾ ತರಬೇತಿಯ ಜ್ಞಾನ ಬೇಕಾಗುತ್ತದೆ ಎಂಬುದನ್ನು ಎಲ್ಲರೂ, ವಿಶೇಷವಾಗಿ ನಮ್ಮ ಮಾಧ್ಯಮ ಸಂಸ್ಥೆಗಳು ಅರಿತುಕೊಳ್ಳಬೇಕಾಗಿದೆ.
ಜನವರಿ 26ರಂದು ದೇಶದ ಬಹುತೇಕ ಸುದ್ದಿ ಕೋಣೆಗಳು ತೀರಾ ಕಳವಳಕಾರಿಯಾಗಿ ನಡೆದುಕೊಂಡವು. ಪ್ರತಿಭಟನಾ ನಿರತ ರೈತರನ್ನು ದೇಶದ್ರೋಹಿಗಳಂತೆ ಬಿಂಬಿಸಲು ಪ್ರಯತ್ನಿಸಿದವು. ರೈತರ ಪ್ರತಿಭಟನೆಯ ಕುರಿತು ಎರಡು ತಿಂಗಳುಗಳ ನಿರಂತರ ಪ್ರತಿಭಟನೆಯ ಕುರಿತು ಚಕಾರವೆತ್ತದ ಕೆಲವು ಮಾಧ್ಯಮಗಳು ಇದ್ದಕ್ಕಿದ್ದಂತೆ ರೈತರನ್ನು ‘ಅತಿಕ್ರಮಿಗಳು’ ‘ಗೂಂಡಾಗಳು’ ಎಂದು ಪ್ರತಿಪಾದಿಸಿಬಿಟ್ಟವು. ಸುಶಾಂತ್ ಸಿಂಗ್ ಪ್ರಕರಣದ ವಿಚಾರಣೆಯ ವೇಳೆ ಮುಂಬೈ ಉಚ್ಚ ನ್ಯಾಯಾಲಯವು “ಮಾಧ್ಯಮಗಳು ನ್ಯಾಯಾಧೀಶರಂತೆ ವರ್ತಿಸಬಾರದು” ಎಂದು ಅಭಿಪ್ರಾಯಪಟ್ಟಿದೆ. ಈ ಅಭಿಪ್ರಾಯವು ರೈತರ ಪ್ರತಿಭಟನೆಯ ವಿಷಯಕ್ಕೂ ಅನ್ವಯಿಸುತ್ತದೆ. ಇದೆಲ್ಲಾ ನಮ್ಮ ಮಾಧ್ಯಮ ಸಂಸ್ಥೆಗಳಿಗೆ ಏಕೆ ಅರ್ಥವಾಗುತ್ತಿಲ್ಲ, ಎಂಬುದು ತಿಳಿಯುತ್ತಿಲ್ಲ.
ಬಿಗ್ ಬ್ರೇಕಿಂಗ್ ನ್ಯೂಸ್, ನಮ್ಮದೇ ಮೊದಲು, ಶಾಕಿಂಗ್ ನ್ಯೂಸ್, ಇದೀಗ ಬಂದ ಸುದ್ದಿ ಎಂದೆಲ್ಲಾ ಬೊಬ್ಬೆಹೊಡೆದುಕೊಳ್ಳುವ, ಬೆಳಗ್ಗೆಯಿಂದ ರಾತ್ರಿವರೆಗೂ ಹೇಳಿದ್ದನ್ನೇ ಹೇಳುವ, ತೋರಿಸಿದ ದೃಶ್ಯಗಳನ್ನೇ ತೋರಿಸುವ ಕನ್ನಡದ ಕೆಲವು ಟಿ.ವಿ.ವಾಹಿನಿಗಳಿಗೆ ರೈತರ ಹೋರಾಟ ಬ್ರೇಕಿಂಗ್ ನ್ಯೂಸ್ ಆಗಲೀ ಅಥವಾ ರೈತರ ಕಣ್ಮರೆಯಾಗಲೀ ಅಥವಾ ರೈತರ ಸಾವಾಗಲೀ ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ. ಸುಪ್ರಿಂಕೋರ್ಟ್ ಕೂಡ “ಪ್ರತಿಭಟನೆ ಸಾಂವಿಧಾನಿಕ ಹಕ್ಕು, ರೈತರು ಶಾಂತಿಯಿಂದ ಪ್ರತಿಭಟನೆ ಮುಂದುವರೆಸಬಹುದು” ಎಂದು ಹೇಳಿದ್ದರೂ, ಕೆಲವು ಮಾಧ್ಯಮಗಳು ಮಾತ್ರ ಪ್ರತಿಭಟನೆಗೆ ತಣ್ಣೀರೆರಚುವ ಕಾರ್ಯಕ್ಕೆ ಮುಂದಾದದ್ದು ಹೊಣಗೇಡಿತನದ ಪರಮಾವಧಿಯಾಗಿದೆ.
ರೈತರ ಪ್ರತಿಭಟನೆಯ ವಿಷಯ ವಿದೇಶಿ ಮಾಧ್ಯಮಗಳಾದ ಸಿಎನ್ಎನ್ ಮತ್ತು ಬಿಬಿಸಿಯಲ್ಲಿ ವರದಿಯಾಗುತ್ತಿದ್ದಾಗ ನಮ್ಮ ಕೆಲವು ಟಿ.ವಿ.ವಾಹಿನಿಗಳು ರಾಧಿಕಾ-ಯವರಾಜ್ ವ್ಯವಹಾರ, ಸಿನಿಮಾ ಜಗತ್ತಿನ ಅತೀ ರಂಜನೀಯ ವಿಷಯಗಳು ಹಾಗೂ ತಮಾಷೆಯ ಸುದ್ದಿಗಳನ್ನು ಪ್ರಸಾರ ಮಾಡುವುದರಲ್ಲಿ ತಲ್ಲೀನವಾಗಿದ್ದವು
ಬೇರೆ ವಿಷಯಗಳು ಬಂದಾಗ ಮಾಧ್ಯಮಗಳು, ತಾವು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೆ ಅಂಗ ಎಂದು ಹೇಳಿಕೊಳ್ಳುತ್ತವೆ. ಆದರೆ ಪ್ರಜಾಪ್ರಭುತ್ವದ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರಲು ಹೊರಟಿರುವುದು ಅವುಗಳಿಗೆ ಏಕೆ ಗಮನಕ್ಕೆ ಬರುತ್ತಿಲ್ಲ? ಎಂಬುದು ಪ್ರಶ್ನೆಯಾಗಿಯೆ ಉಳಿದಿದೆ.
###
-ಡಾ.ಅಮ್ಮಸಂದ್ರ ಸುರೇಶ್
ಮಾಧ್ಯಮ ವಿಶ್ಲೇಷಕರು ಮತ್ತು ಹವ್ಯಾಸಿ ಹಿರಿಯ ಅಭಿವೃದ್ದಿ ಪತ್ರಕರ್ತರು
ಮೊಬೈಲ್ : 9448402346