ಅನುದಿನ ಕವನ-೪೧ ಕವಿ:ಮನಂ (ಮಳವಳ್ಳಿ ನಂಜುಂಡಸ್ವಾಮಿ)

ಮನಂ ಕಾವ್ಯನಾಮದಿಂದ ಜನಪ್ರಿಯರಾಗಿರುವ ಸಾಹಿತಿ, ಸಂಶೋಧಕ ಶ್ರೀ ಎಂ. ನಂಜುಂಡಸ್ವಾಮಿ ಅವರು ಪ್ರಸ್ತುತ ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿ(ಐಜಿಪಿ) ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಂಶೋಧನೆ, ಕತೆ ಬರೆಯುವುದು, ಇವರೇ ರಚಿಸಿದ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವುದು ಮನಂ ಅವರಿಗೆ ತುಂಬಾ ಇಷ್ಟ. ಉತ್ತಮ ವಾಗ್ಮಿ, ಇವರ ಭಾಷಣಗಳು ಸಾವಿರಾರು ಅಭಿಮಾನಿಗಳನ್ನು ಹುಟ್ಟು ಹಾಕಿವೆ.
ಇವರ ಹದಿನೈದಕ್ಕೂ ಹೆಚ್ಚು ಕವಿತೆಗಳು ರಾಗ ಸಂಯೋಜನೆಗೊಂಡು ಜನಪ್ರಿಯವಾಗಿವೆ.
ಸಹೃದಯರಿಂದ ಪ್ರೇಮ ಕವಿ ಎಂದು ಕರೆಯಿಸಿಕೊಳ್ಳುವ ಮನಂ ಅವರ ‘ಮನದೊಳಿಲಾರದ ಕಾವ್ಯಕನ್ನಿಕೆ’ ಕವನ ಸಂಕಲನ ಶೀಘ್ರ ಕಾವ್ಯ ಪ್ರಿಯರಿಗೆ ಸಿಗಲಿದೆ.
ಇಂದಿನ ಅನುದಿನ ಕವನ ದ ಗೌರವಕ್ಕೆ ಮನಂ ಅವರ ‘ಯಾವ ನಾಡಿಗೆ ನಡೆದು ಹೋದೆ ನಲ್ಲೆ?’ ಕವಿತೆ ಪಾತ್ರವಾಗಿದೆ.👇

ಯಾವ ನಾಡಿಗೆ ನಡೆದು ಹೋದೆ ನಲ್ಲೆ?

ಯಾವ ನಾಡಿಗೆ ನಡೆದು ಹೋದೆ ನಲ್ಲೆ?
ನೀನು ಹೋದ ನಾಡಿನಿಂದ ಸಂದೇಶಗಳ ಕಳಿಸಲು ಆಗುವುದಿಲ್ಲವೇ?
ನಮ್ಮ ನಾಡಿನಿಂದ ಸಂದೇಶಗಳ ಪಡೆಯಬಾರದೆಂಬ

ಕಟ್ಟಳೆ ಇದೆಯೇ?

ಯಾವ ನಾಡಿಗೆ ನಡೆದು ಹೋದೆ ನಲ್ಲೆ?
ನೀನು ಹೋದ ನಾಡಿನಲ್ಲಿ ಮೋಡಗಳಂತೆ ನೆನಪುಗಳೂ ಹಾರಿಹೋಗುತ್ತವೆಯೇ?
ನಮ್ಮ ನಾಡಿನಿಂದ ಕಟ್ಟಿ ಕೊಟ್ಟಿದ್ದ ನೆನಪಿನ ಬುತ್ತಿಯ ಉಣ್ಣಬಾರದೆಂಬ ಕಟ್ಟಳೆ ಇದೆಯೇ?

ಯಾವ ನಾಡಿಗೆ ನಡೆದು ಹೋದೆ ನಲ್ಲೆ?
ನೀನು ಹೋದ ನಾಡಿನಲ್ಲಿ ನಮ್ಮ ನೆನೆಯಲು ಏನಾದರೂ ತೆರಿಗೆ ಕಟ್ಟಬೇಕೆ?
ನಮ್ಮ ನಾಡಿನಲ್ಲಿ ನಿನ್ನ ನೆನೆಯುತ್ತಿರುವವರ

ಮರೆಯ ಬೇಕೆಂಬ ಕಟ್ಟಳೆ ಇದೆಯೇ?

ಯಾವ ನಾಡಿಗೆ ನಡೆದು ಹೋದೆ ನಲ್ಲೆ?
ನೀನು ಹೋದ ನಾಡಿನಲ್ಲಿ ಮನಸ್ಸಿನಿಂದಲೂ ದೂರ ಹೋಗಲು ಕಲಿಸುತ್ತಾರೆಯೇ?
ನಮ್ಮ ನಾಡಿನಲ್ಲಿ ನಿನ್ನ ಯಾವುದೇ ಸಂಬಂಧವೂ

ಇರದಂತೆ ಕಟ್ಟಳೆ ಇದೆಯೇ?

– ಮನಂ