ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ರಾಜಧಾನಿ ಐತಿಹಾಸಿಕ ಹಂಪಿಯ ಅಭಿವೃದ್ಧಿಗೆ ಕೇಂದ್ರ ಸರಕಾರ 480ಕೋಟಿ ರೂ.ನೀಡಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪುರಂದರದಾಸರ ಆರಾಧನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಡೀ ಪ್ರಪಂಚದಲ್ಲಿಯೇ ಅತ್ಯದ್ಭುತ ಸ್ಥಳವಾಗಿರುವ ಹಂಪಿಯ ಇತಿಹಾಸವನ್ನು ಅಚ್ಚುಕಟ್ಟಾಗಿ ಸಂಶೋಧಿಸುವ ಕೆಲಸವಾಗಬೇಕು ಮತ್ತು ಈ ಮೂಲಕ ಮುಂದಿನ ಪೀಳಿಗೆಗೆ ಇದರ ಇತಿಹಾಸ ತಿಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಹಂಪಿಯಲ್ಲಿನ ವೈವಿಧ್ಯಮಯ ಕಲಾವಾಸ್ತುಶಿಲ್ಪ ಮತ್ತು ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಅಚ್ಚುಕಟ್ಟಾಗಿ ಸಂಶೋಧನೆ ಮಾಡಿ;ನೈಜ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕಿದೆ ಮತ್ತು ಈ ಅಮೂಲ್ಯ ಸಾಮ್ರಾಜ್ಯವನ್ನು ರಕ್ಷಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ವಿಜಯನಗರ ಸಾಮ್ರಾಜ್ಯ ಯಾವ ರೀತಿ ಇತ್ತು ಎಂಬುದು ನಮ್ಮ ಕಲ್ಪನೆ ಸಹ ಮಾಡಿಕೊಳ್ಳುವುದಕ್ಕಾಗಲ್ಲ;ಇಲ್ಲಿನ ಪ್ರತಿ ಕಲ್ಲು ಕೂಡ ಇತಿಹಾಸ ಹೇಳುತ್ತದೆ. ಅಧಿಕಾರಿಗಳ ಜೊತೆಗೆ ಇಂದು ಪರಿವೀಕ್ಷಣೆ ನಡೆಸಿದ ಸಂದರ್ಭದಲ್ಲಿ ಹಲವಾರು ಸ್ಥಳಗಳನ್ನು ನೋಡಿ ಆಶ್ಚರ್ಯಚಕಿತನಾದೆ. ಹಂಪಿಯಲ್ಲಿ ಇದುವರೆಗೆ ಉತ್ಖನನವಾಗಿರುವುದು ಕೇವಲ ಶೇ.10ರಷ್ಟು ಮಾತ್ರ;ಇನ್ನೂ ಶೇ.90ರಷ್ಟು ಉತ್ಖನನ ನಡೆಯಬೇಕಿದೆ ಎಂದು ಹೇಳಿದರು.
ದಾಸಶ್ರೇಷ್ಠರಲ್ಲಿ ಒಬ್ಬರಾಗಿರುವ ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಕಟ್ಟುವ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ವಿಜಯನಗರ ಜಿಲ್ಲೆಯಾದ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ ಎಂದು ಹರ್ಷಿಸಿದರು.
ವಿಶೇಷ ಉಪನ್ಯಾಸ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ ಅವರು, ಪುರಂದರದಾಸರು ಕೀರ್ತನೆಗಳ ಮೂಲಕ ನಡೆಸಿದ ವೈಚಾರಿಕ ಕ್ರಾಂತಿ ಹಾಗೂ ಕೀರ್ತನೆಗಳ ಮೂಲಕ ನಡೆಸಿದ ಜಾಗೃತಿಯನ್ನು ಪ್ರಸ್ತುತಪಡಿಸಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ,ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿದರು.
ಪ್ರಾಧ್ಯಾಪಕ ಮಾನಕಾರಿ ಆಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ ಪುರಂದರದಾಸರ ಪಂಚ ಶತಮಾನೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಬೇಕು. ವಿಜಯವಿಠ್ಠಲ ಮಂದಿರದ ಹಿಂಭಾಗದಲ್ಲಿರುವ ಪುರಂದರಮಂಟಪಕ್ಕೆ ಹೋಗುವ ಸ್ಥಳದಲ್ಲಿ ಕಲ್ಲುಹಾಸು ನಿರ್ಮಿಸಬೇಕು ಹಾಗೂ ದಾಸಕೀರ್ತನೆಗಳ ಮೂಲಕ ಜೀವನಚೈತನ್ಯ ತುಂಬುವ ಕೆಲಸವನ್ನು ಪುರಂದರ ಮಂಟಪದಲ್ಲಿ ಮಾಡಬೇಕು ಎಂದು ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ತಾಪಂ ಅಧ್ಯಕ್ಷೆ ನಾಗವೇಣಿ,ತಾಪಂ ಸದಸ್ಯ ಪಾಲಪ್ಪ,ಹಂಪಿ ಗ್ರಾಪಂ ಅಧ್ಯಕ್ಷ ತಳವಾರ ಹನುಮಂತಪ್ಪ,ಜಿಪಂ ಸಿಇಒ ಕೆ.ಆರ್.ನಂದಿನಿ,ಎಡಿಸಿ ಪಿ.ಎಸ್.ಮಂಜುನಾಥ, ಮುಖಂಡರಾದ ಮುನ್ನಾಸಿಂಗ್, ಎಸಿ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವನಾಥ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ,ಕಮಲಾಪುರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ ಸೇರಿದಂತೆ ಅನೇಕರು ಇದ್ದರು.
ಪುರಂದರದಾಸರ ಆರಾಧನೋತ್ಸವ ವೀಕ್ಷಿಸಲು ನಾಡಿನ ವಿವಿಧೆಡೆಯಿಂದ ಜನರು ಆಗಮಿಸಿದ್ದರು.
—