“ಇದು ಹೆಜ್ಜೆ ಹೆಜ್ಜೆಯೊಳಗಿನ ಗೆಜ್ಜೆ ಸ್ವರಗಳ ಕವಿತೆ. ಬದುಕಿನ ನಡಿಗೆಯ ಭಾವಗೀತೆ. ಇದು ನಮ್ಮ ನಿಮ್ಮದೇ ಬಾಳಪಯಣದ ನಿತ್ಯ ಸತ್ಯ ಗೀತೆ. ಇಡುವ ಪ್ರತಿ ಹೆಜ್ಜೆಯಲೂ ಜೀವದ ಭವಿಷ್ಯವಿದೆ. ಜೀವನದ ಗುರಿ-ಗಮ್ಯಗಳ ಆಯುಷ್ಯವಿದೆ. ಹೆಜ್ಜೆ ಹೆಜ್ಜೆಗೂ ಮಹತ್ವವಿದೆ. ಹೆಜ್ಜೆ ಹೆಜ್ಜೆಯೊಳಗೂ ಸತ್ವವಿದೆ. ಹಲವು ತತ್ವವಿದೆ. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇
ಹೆಜ್ಜೆ.. ಹೆಜ್ಜೆ..!
ಜೀವವೇ ಸಾವಿರ ಸಲ ಯೋಚಿಸು
ಒಮ್ಮೆ ಮುಂದಡಿ ಇಡುವ ಮುನ್ನ
ಇಟ್ಟ ಮೇಲೆ ಎಂದು ಎಂದೆಂದೂ
ಹಿಂತಗೆಯಬೇಡ ದಿಟ್ಟ ಹೆಜ್ಜೆಯನ್ನ
ಬಂದಿದ್ದ ಬಂಡೆಯಂತೆ ಎದುರಿಸು.!
ಹೆಜ್ಜೆಯಿಡದೆ ವೃಥಾ ಯೋಚಿಸಿದರೆ
ಗೆಲುವೆಂಬುದು ಬರೀ ಮರೀಚಿಕೆ.!
ಅಡಿಯಿಟ್ಟು ಅಡಿಗಡಿಗು ಚಿಂತಿಸಿದರೆ
ಬದುಕೆಂಬುದು ನಿತ್ಯ ಚಡಪಡಿಕೆ.!
ಅಶಾಂತಿ ಯಾತನೆಗಳ ಸರಮಾಲಿಕೆ.!
ಮನದ ನಿರ್ಧಾರ ಸಂಕಲ್ಪಗಳಿಗೆಂದು
ಪಾದಗಳು ಪುಟಿದು ಬದ್ದವಾಗಿರಬೇಕು
ಪಾದಗಳ ಚಲನೆ ಸಂಚಲನೆಗಳಿಗೆಂದು
ಮನ ಮನಸ್ಪೂರ್ತಿ ಜೊತೆಯಿರಬೇಕು.!
ಸ್ಫೂರ್ತಿ ತುಂಬಿ ದೀಪ್ತಿಯಾಗಬೇಕು.!
ಬದುಕೆಂದರೆ ನಿತ್ಯ ನಿರಂತರ ಚಾರಣ
ತನುಮನಗಳ ಜೋಡೆತ್ತಿನ ಪಯಣ
ಆಂತರ್ಯ ಸ್ವರಗಳ ಶಕ್ತಿ ಔದಾರ್ಯ
ಹೆಜ್ಜೆ ಹೆಜ್ಜೆ ಪುಳಕಿಸುವ ಮಾಧುರ್ಯ
ಜೀವ ಜೀವನ ನಡಿಗೆಯ ಸೌಂದರ್ಯ.!
–ಎ.ಎನ್.ರಮೇಶ್. ಗುಬ್ಬಿ.