ಅನುದಿನ ಕವನ-೪೩ (ಯುವ ಕವಿ: ವೀರಪ್ಪ ತಾಳದವರ, ಯಾವಗಲ್)

ಯುವ ಕವಿ ವೀರಪ್ಪ ತಾಳದವರ ಕಿರುಪರಿಚಯ
*****
ಪೂರ್ಣ ಹೆಸರು: ವೀರಪ್ಪ ತಾಳದವರ.
ಜನನ: ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ ಗ್ರಾಮದಲ್ಲಿ ಜೂನ್ 22 , 1987

ಕಾವ್ಯನಾಮ: ಈಹತಾ

ಅಗ್ನಿಶಾಮಕ ಇಲಾಖೆಯ ಮೂಲಕ ವೃತ್ತಿ ಬದುಕು ಆರಂಭ. ಸಧ್ಯ ಭಾರತೀಯ ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ.

ಹವ್ಯಾಸಗಳು: ಪುಸ್ತಕ ಓದುವುದು, ಕವಿತೆ ಬರೆಯುವುದು, ಚಿತ್ರಕಲೆ ಬಿಡಿಸುವುದು, ಛಾಯಾಗ್ರಹಣ, ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸುವುದು ಹಾಗೂ ಹಿನ್ನೆಲೆ ಧ್ವನಿ ನೀಡುವುದು ನೆಚ್ಚಿನ ಹವ್ಯಾಸ.

ಕೃತಿಗಳು: ಕಪ್ಪು ನೆಲದ ಹಾಡು, ನೆಲದವ್ವನ ಕಾವ್ಯ ಪ್ರಕಟಿತ ಕೃತಿಗಳಾಗಿವೆ. ಚಿಮಣಿ ಬೆಳಕಿನ ಅಕ್ಷರ, ಪುಟ್ಟ ಮಕ್ಕಳ ಹಾಡು ಮುದ್ರಣ ಹಂತದಲ್ಲಿವೆ.

ಸುಮಡ್ಡಿ ಶಾಲೆ, ಗ್ರಾಮೀಣ ಹೆಜ್ಜೆಮೇಳ, ಮೇ ಸಾಹಿತ್ಯ ಮೇಳ, ಪೋದನೊರ ರೈಲ್ವೆ ತರಬೇತಿ ಕೇಂದ್ರದ ಸಾಕ್ಷ್ಯ ಚಿತ್ರ ನಿರ್ದೇಶನ.

ಪ್ರಸ್ತುತ ಹುಟ್ಟೂರು ಯಾವಗಲ್ ಗ್ರಾಮದಲ್ಲಿ ಬಡ ಮಕ್ಕಳಿಗಾಗಿ ಹಳ್ಳಿರಂಗ ರಾತ್ರಿ ಶಾಲೆ ಆರಂಭ.

ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಕಪ್ಪು ನೆಲದ ಹುಡುಗ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ವೀರಪ್ಪ ತಾಳದವರ ‘ಭಾರತವೆಂಬ ಹೂದೋಟ’ ಕವಿತೆ ಪಾತ್ರವಾಗಿದೆ.👇

ಭಾರತವೆಂಬ ಹೂದೋಟ
___________________________

ಭಾರತವೆಂಬ ಹೂದೋಟದಲ್ಲಿ
ಒಂದೇ ಬಗೆಯ ಹೂಗಳಿದ್ದರೆ ಸಾಕೆ?
ಬಗೆ ಬಗೆಯ ಬಣ್ಣ ಬಣ್ಣದ ಕುಸುಮಗಳು    ಬೇಡವಾದವು ಏಕೆ?

ಧರೆಯೆಂದರೆ ಬರಿ ಮಣ್ಣೊಂದೆ ಇದ್ದಿತೆ?
ಪೂಜಿಸಿ, ಧ್ಯಾನಿಸುವ ಶಿಲೆಗಳು ಮಾತ್ರ ಕಾಣಸಿತೆ?

ಗೂಡು ಕಟ್ಟಿದ ಹಕ್ಕಿಗಳು
ಬಲೆ ನೇಯ್ದ ಜೇಡಗಳು
ಘರ್ಜಿಸಿ ಎದೆ ನಡುಗಿಸುವ ಮೃಗಗಳು
ಭಿತ್ತಿ ಬೆಳೆವ ಕ್ಷೀರವ ಕೊಡುವ ಪಶುವಾರುಗಳು
ಈ ನೆಲೆಯ ಮೇಲೆ ಬೇರು ಬಿಡುವುದೇ      ಪ್ರಮಾದವೆಂದರೆ ಈ ಲೋಕವೆಲ್ಲಾ ಏನಾದಿತೆ?

ಪ್ರೇಮವೆಂದರೆ,ಭಕ್ತಿಯೆಂದರೆ
ಸಹಬಾಳ್ವೆ ಎಂದರೆ
ಬೇಲಿ ನೆಟ್ಟು, ಗೋಡೆ ಕಟ್ಟಿ ,ಶಸ್ತ್ರ ಹಿಡಿದು
ಪರರ ಮೇಲೆ ಬರಿ ಕಾದಾಡುವುದೆ ಆದಿತೆ?

ನನ್ನೊಂದಿಗೆ ಹೂವು ಕಟ್ಟುವವರು ಇರಲಿ
ಪಾದುಕೆ ಮಾಡುವವರು ಇರಲಿ!
ಬೀದಿ ಬದಿಯ ಗೂಡಿಸುವವರು ಇರಲಿ
ಒಟ್ಟಾರೆ ಈ ತಾಯ್ನಾಡು ಎನ್ನುವ ಮಣ್ಣಲಿ
ಎಲ್ಲವೂ ಇರಲಿ ಎಲ್ಲವೂ ಉಸಿರಿಸಲಿ
ನನ್ನದು ಎನ್ನುವ ಮದದಲ್ಲಿ
ಅನ್ಯ ಗೂಡಿನತ್ತ ಹಗೆತನ ಮಾತ್ರ
ಹರಡದಿರಲಿ!!

– ವೀರಪ್ಪ ತಾಳದವರ, ಯಾವಗಲ್.