ಬಳ್ಳಾರಿ: ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದಂತ ಮಹಿಳೆಯರನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಸ್ತ್ರೀಯರಿಗೆ ಸಮಾನವಾದ ಅವಕಾಶಗಳನ್ನು ನೀಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ಪ್ರೊ. ಬಿ.ವಿಜಯ ಕುಮಾರ್ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿದ್ಯಾಲಯದ ಆವರಣದಲ್ಲಿ ಸೋಮವಾರ(ಫೆ.15) ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಓದು ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಮನೆಯನ್ನು ಬಿಟ್ಟು ಸಮಾಜದ ಮುನ್ನಲೆಗೆ ಬರಬೇಕಾದರೆ ಶಿಕ್ಷಣ ತುಂಬಾ ಮುಖ್ಯ. ಶಿಕ್ಷಣದಿಂದ ಮಾತ್ರ ಮಹಿಳೆಯ ಅಭಿವೃದ್ಧಿ ಸಾಧ್ಯ ಎಂದು ತಿಳಿದಿದ್ದ ಡಾ. ಅಂಬೇಡ್ಕರ್ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಇದರ ಫಲವಾಗಿ ಇಂದು ಹಲವಾರು ಜನ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು.
ಇಂದಿನ ಹೆಣ್ಣು ಮಕ್ಕಳು ಡಾ,ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಲಭಿಸಿದ ಶಿಕ್ಷಣವನ್ನು ಪಡೆದು ನಿಮ್ಮ ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಸಮಾಜದ ಬೆಳವಣಿಗೆಗೆ ಸಹಕರಿಸಿ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣನವರ್ ಅವರು ಮಾತನಾಡಿ,ಸಮಾಜ ಕಟ್ಟ ಕಡೆಯ ಸಮುದಾಯಗಳನ್ನು ಸಮಾಜದ ಮುನ್ನಲೆಗೆ ತರುವ ಮೂಲಕ ಆಯಾ ಸಮುದಾಯದ ಜನರನ್ನು ಮೇಲ್ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಮಾಡಿದ ಕಾರ್ಯ ಅತ್ಯಂತ ಪ್ರಮುಖವಾದದ್ದು. ಅಂದು ಅವರು ನೀಡಿದ ಮೀಸಲಾತಿಯ ಸೌಲಭ್ಯವನ್ನು ಪಡೆಯಲು ಇಂದಿಗೂ ಜನ ಪರಿತಪಿಸುವುದನ್ನು ನೋಡಿದರೆ ಅವರು ಎಂತಹ ದೂರದೃಷ್ಟಿಯನ್ನು ಇಟ್ಟುಕೊಂಡು ಸಂವಿಧಾನ ರೂಪಿಸಿದ್ದರು ಎನ್ನುವುದು ನಮಗೆ ಅರಿವಾಗುತ್ತದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಇರಲಿಲ್ಲ;ಅಂತಹ ಸಮಯದಲ್ಲಿಯೇ ಅಂಬೇಡ್ಕರ್ ಅವರು ಸಮಾಜವನ್ನು ಕಟ್ಟುವ ಕೆಲಸ ಮಾಡಿದ್ದರು ಎಂದು ಕೊಂಡಾಡಿದರು.
ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ವೈ.ತಿಮ್ಮಾರೆಡ್ಡಿ ಅವರು ಮಾತನಾಡಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ,ಬಿ.ಆರ್.ಅಂಬೇಡ್ಕರ್ ಅವರು ಬೆಳೆದ ರೀತಿ, ಅವರ ಜೀವನ ವಿಧಾನ, ಅವರು ಅನುಭವಿಸಿದ ಕಷ್ಟ, ಎಲ್ಲವನ್ನು ಮೆಟ್ಟಿನಿಂತು ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವವರೆಗೂ ಅವರು ನಡೆದ ಬಂದ ಹಾದಿ ಇಂದಿನ ಯುವ ಜನತೆಗೆ ಮಾದರಿ. ಅವರು ರೂಪಿಸಿದ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಹೋಗುವ ಕೆಲಸ ನಮ್ಮಿಂದ ಆಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿರುಗುಪ್ಪ ಬಿ.ಇ ರಾಮಯ್ಯ, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧಾಕರ್, ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿದ್ಯಾಲಯದ ಉಪನ್ಯಾಸಕ ಡಿ.ಮಲ್ಲಿಕಾರ್ಜುನ, ಜಿ.ಶಶಿಕಿರಣ್, ಡಾ.ಜಲಜಾಕ್ಷಿ, ಟಿ.ರಾಮಲಿಂಗ, ಸುಂದರಮೂರ್ತಿ, ಕಾಲೇಜಿನ ಇತರೆ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಇದ್ದರು.
*-*-*-