ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆ’ ಜನಾಂದೋಲನಕ್ಕೆ ಹಲಕುಂದಿಯಲ್ಲಿ ಡಿಸಿ ಚಾಲನೆ, ಸ್ವಚ್ಛ-ಸ್ವಸ್ಥ ಗ್ರಾಮಗಳಿಂದ ಸದೃಢ ಸಮಾಜ:ಪವನಕುಮಾರ್ ಮಾಲಪಾಟಿ

  1. ಬಳ್ಳಾರಿ: ಸ್ವಚ್ಛತೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ; ಗ್ರಾಮಗಳು ಸ್ವಚ್ಛವಾಗಿದ್ದಲ್ಲಿ ಸಾಮಾಜಿಕ,ಆರ್ಥಿಕ ಹಾಗೂ ಆರೋಗ್ಯಕರ ಜೀವನ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು
    ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಹಲಕುಂದಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ
    ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಎಂಬ ಜಿಲ್ಲಾಮಟ್ಟದ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಗ್ರಾಮಸ್ಥರು ಪ್ರತಿವಾರ ಒಂದು ಗಂಟೆ ಶ್ರಮದಾನದ ಮೂಲಕ ಓಣಿಗಳನ್ನು ಸ್ವಚ್ಛಗೊಳಿಸಬಹುದು. ಈ ಹಿನ್ನಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ತಿಳಿಸಿದರು.
    ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಲ್ಪಿಸಿ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದರ ಮೂಲಕ ಸ್ವಚ್ಛ-ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸದೃಢ ಸಮಾಜ ರೂಪಿಸಬಹುದಾಗಿದೆ. ಈ ತ್ಯಾಜ್ಯ ಸಮರ್ಪಕ ನಿರ್ವಹಣಾ ಕಾರ್ಯಕ್ಕೆ ಗ್ರಾಮೀಣ ಜನರು ಕೈ ಜೋಡಿಸಬೇಕು ಎಂದರು.
    ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆಯು ಮಾನವನ ಮೂಲಭೂತ ಹಕ್ಕಾಗಿದ್ದು, ಉತ್ತಮ ಆರೋಗ್ಯ ಹೊಂದಿ ಗೌರವಯುತ ಜೀವನ ನಡೆಸಲು ಅಗತ್ಯವಾಗಿದೆ ಎಂದು ತಿಳಿಸಿದರು.
    ಜಿಪಂ ಸಿಇಓ ಕೆ.ಆರ್.ನಂದಿನಿ ಅವರು ಮಾತನಾಡಿ, ಸ್ವಚ್ಛ ಸುಂದರ ಕರ್ನಾಟಕವನ್ನಾಗಿಸುವ ವಿಶಾಲ ದೃಷ್ಟಿಕೋನದಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಬಳ್ಳಾರಿ ಜಿಲ್ಲೆಯ 330681 ಎಲ್ಲಾ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿ ಶೇ.100 ಪ್ರಗತಿ ಸಾಧಿಸಿ ಬಯಲು ಬಹಿರ್ದೆಸೆಗೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ ಎಂದರು.
    ಇದಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲಾ ಗ್ರಾಮೀಣ ಕುಟುಂಬಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯತೆಯಿದೆ. ಆದ್ದರಿಂದ ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಲ್ಪಿಸಿದರೆ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಸ್ವಚ್ಛ-ಸ್ವಸ್ಥ ಗ್ರಾಮಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
    ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ನಮ್ಮ ಗ್ರಾಮ ನಮ್ಮ ಜವಾಬ್ದಾರಿ ಎಂಬ ಧ್ಯೇಯೋದ್ದೇಶದಿಂದ “ಈ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ” ಎಂಬ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
    ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಹಲಕುಂದಿ ಗ್ರಾಮದಲ್ಲಿ ಚಾಲನೆ ನೀಡಲಾಗಿದ್ದು, ಇಂದು ನಾವುಗಳು ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಗಳನ್ನು ಗ್ರಾಮದ ಸದಸ್ಯರು ಪ್ರತಿ ವಾರ ಹಮ್ಮಿಕೊಂಡು ಮಾದರಿ ಗ್ರಾಮವನ್ನಾಗಿ ಮಾಡುವಂತೆ ಸಲಹೆ ನೀಡಿದರು.
    ಮೂರು ತಿಂಗಳು ನಂತರ ಸದರಿ ಗ್ರಾಮಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಛ ಸುಂದರ ಗ್ರಾಮವಾಗಿ ರೂಪಗೊಳ್ಳುವಂತೆ ಎಲ್ಲಾ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದರು.
    ಜಿಲ್ಲೆಯ ಒಟ್ಟು 237 ಗ್ರಾಮ ಪಂಚಾಯತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕ್ರಿಯಾ ಯೋಜನೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಪ್ರಸ್ತುತ ಜಿಲ್ಲೆಯ 102 ಗ್ರಾಮ ಪಂಚಾಯತಿಗಳಿಗೆ ಕಸದ ಬುಟ್ಟಿ ಮತ್ತು ವಾಹನವನ್ನು ನೀಡಿ ಕಸ ಸಂಗ್ರಹಣೆ ಪ್ರಾರಂಭಿಸಲಾಗಿದೆ ಎಂದು ಕೆ.ಆರ್.ನಂದಿನಿ ಅವರು ಮಾಹಿತಿ ನೀಡಿದರು.
    ಈ ಜನಾಂದೋಲನದ ಕಾರ್ಯಕ್ರಮದಲ್ಲಿ ಸಸಿ ನೆಡುವುದು, ಪೈಪ್ ಕಾಂಪೋಸ್ಟಿಂಗ್ ಉದ್ಘಾಟನೆ, ಜನ ಜಾಗೃತಿ ರಥಕ್ಕೆ ಚಾಲನೆ, ಶಾಲಾ ಮಕ್ಕಳಿಂದ ಜಾಥಾ, ಶ್ರಮದಾನ, ಪ್ರತಿಜ್ಞಾ ವಿಧಿ ಬೋದನೆ, ವೇದಿಕೆ ಕಾರ್ಯಕ್ರಮ ಹಾಗೂ ಮಕ್ಕಳಿಂದ ಕಿರು ನಾಟಕ ಪ್ರದರ್ಶನ ನಡೆಯಿತು.
    ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ಜಾನಕಿರಾಂ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಗ್ರಾಪಂ ಉಪಾಧ್ಯಕ್ಷ ಪೆದ್ದಣ್ಣ,ಗ್ರಾಮದ ಸರ್ವಸದಸ್ಯರು ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.