ಅನುದಿನ ಕವನ-೪೭. (ಕವಿ:ಕೆ.ಜಿ.ಭದ್ರಣ್ಣವರ)

ಇಂದಿನ “ಅನುದಿನ ಕವನ”ದ ಗೌರವಕ್ಕೆ
ಹಿರಿಯ ಕವಿ ಕೆ.ಜಿ.ಭದ್ರಣ್ಣ ಅವರ ಹನಿಗವನಗಳು ಪಾತ್ರವಾಗಿವೆ.👇

ಹನಿಗವನಗಳು
*****
೧. ಮೂಢ ನಂಬಿಕೆ
ಮೂಢ ನಂಬಿಕೆಗಳ
ದಾಸ, ಎದುರಿಗೆ
ಕಾಣುವ ಕಲ್ಲು, ಕಟ್ಟಿಗೆಗೂ ಕೈಮುಗಿಯುತ್ತಾನೆ!.

೨. ( ಜೋ)ಕುಮಾರ
ಒಳ್ಳೆಯ ಸಂಸ್ಕಾರದಲ್ಲಿ
ಬೆಳೆದವನು ‘ ಶಿವಕುಮಾರನಾದ,
ಕೆಟ್ಟ ಸಂಸ್ಕಾರದಲ್ಲಿ
ಬೆಳೆದವನು ಜೋಕುಮಾರನಾದ!.

೩. ( ಪಂಗ ) ನಾಮ
ಕೆಲವು ಆಷಾಢ ಭೂತಿಗಳ ಹಣೆಯ ಮೇಲೆ ಸದಾ ವಿಭೂತಿ
ನಾಮ, ಬಾಯಲ್ಲಿ ದೇವರ ನಾಮ!
ಯಾಕಂದರೆ,
ಮುಗ್ಧರಿಗೆ ಹಾಕಲು
ಬೇಕಲ್ಲಾ ಪಂಗನಾಮ!!.

೪. ವಾಸ್ತವ
ಸಾಹುಕಾರನಾಗಲು
ಸರಾಯಿ ಮಾರು!.
ಬಡವನಾಗಿಯೇ
ಉಳಿಯಲು ಪುಸ್ತಕ
ಮಾರು!.

೫. ಅಲಂಕಾರ
” ಅಯ್ದೇ ನಿಮಿಷಗಳಲ್ಲಿ
ಬರುವೆ”ನೆಂದು ಅಲಂಕಾರದಲ್ಲಿ
ಮುಳುಗಿದ ರಾಧೆಯ
ದಾರಿ ಕಾಯುತ್ತಾ,
ಕೊಳಲನೂದುತ್ತಾ
ಕುಳಿತಿದ್ದಾನೆ ಕೃಷ್ಣ
ಯುಗ- ಯುಗಗಳಿಂದ!.

೬. ನೆನಪುಗಳು
ಈ ನೆನಪುಗಳೇ ‘ ಹೀಗೆ’,
ಸದಾ ಹಿಂಬಾಲಿಸುತ್ತವೆ
ನಮ್ಮ ನೆರಳಿನ ‘ ಹಾಗೆ’!

೭. ಹೊಟ್ಟೆ
ಮಾನವನಿಗೆ ದೇವರು
ಕಣ್ಣು, ಕಿವಿ, ಮೂಗು,
ಕೈ, ಕಾಲು…. ಕೊಟ್ಟ.
” ಇಷ್ಟು ಸಾಕೇ?!” ಎಂದು ಕೇಳಿದ.
” ಇನ್ನಷ್ಟಿದ್ದರೆ ಕೊಡು!”
ಅಂದ. ಸದಾ ಹಸಿವಿನಿಂದಳುವ
ಹೊಟ್ಟೆಯನು ಕೊಟ್ಟ!.

೮. ದ್ವೇಷ
ಶತೃವನ್ನು ಸುಡಲೆಂದು
ಹಿಡಿದ ಕೆಂಡ, ಮೊದಲು
ಹಿಡಿದುಕೊಂಡವನನ್ನೇ ಸುಡುತ್ತದೆ!.

೯. ಯಂಗ್ ಏಜು!
ಅವಳಿಗೆ ಯಂಗ್ ಏಜು
ಅದಕ್ಕೇ ಅವಳು
ಸದಾ ಎಂಗೇಜು!.

-ಕೆ.ಜಿ.ಭದ್ರಣ್ಣವರ