ಬಳ್ಳಾರಿ, ಫೆ.18: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಬಳ್ಳಾರಿ ಜಿಲ್ಲಾ ಸಮಿತಿಯು ಫೆ. 20 ರಂದು ಶನಿವಾರ ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿ ಅಂಗವಾಗಿ ಬೃಹತ್ ಸಮಾವೇಶವನ್ನು ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿಯ ಸಂಘಟನಾ ಸಂಚಾಲಕ ರಾಜು ಎಂ ತಳವಾರ್ ಅವರು ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಮಾವೇಶವನ್ನು ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಾತಾ ಮಂಜಮ್ಮ ಜೋಗತಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ ಆರ್ ಮೋಹನ್ ರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಮೆರವಣಿಗೆ: ನಗರದ ರೈಲ್ವೆ ನಿಲ್ದಾಣದ ಮುಂಭಾಗದಿಂದ ರಾಘವ ಕಲಾಮಂದಿರದವರೆಗೆ ಮೆರವಣಿಗೆ ಬೆಳಗ್ಗೆ 11.00 ಗಂಟೆಗೆ ನಡೆಯಲಿದೆ. ಸಮಾವೇಶಕ್ಕೆ ರಾಜ್ಯದಾದ್ಯಂತ ಆಹ್ವಾನಿತ ಗಣ್ಯರು, ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಲೆ ಏರಿಕೆ ಖಂಡನೆ: ಕೇಂದ್ರ ಸರಕಾರ ನಿರಂತರ ಪೆಟ್ರೋಲ್, ಡಿಸೇಲ್ ಏರಿಸುತ್ತಿರುವುದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಸರಕಾರಗಳ ಜನ ವಿರೋಧಿ ನೀತಿಗಳನ್ನು ರಾಜ್ಯ ಸಮಿತಿ ಖಂಡಿಸುತ್ತದೆ ಎಂದರು.
12 ಸಮಾವೇಶ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯಾದಾದ್ಯಂತ ಒಟ್ಟು 12 ಸಮಾವೇಶಗಳನ್ನು ನಿರ್ಧರಿಸಲಾಗಿದ್ದು, ಈಚೆಗೆ ಚಿಕ್ಕೋಡಿಯಲ್ಲಿ ಜರುಗಿದ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ. ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ಎರಡು, ಎರಡೂವರೆ ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬರುವ ಮಾರ್ಚ್ 20 ರಂದು ಕೊಪ್ಪಳ, ಮೇ 1 ರಂದು ಕೋಲಾರ, ಮೇ 20 ರಂದು ರಾಯಚೂರಿನಲ್ಲಿ ಸಮಾವೇಶ ನಡೆಯಲಿವೆ. ಉಳಿದ ಏಳು ಸ್ಥಳಗಳಲ್ಲಿ ನಡೆಯುವ ಸಮಾವೇಶದ ದಿನಾಂಕಗಳನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ರಾಜು ತಳವಾರ್ ಅವರು ಉತ್ತರಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಶಿವಕುಮಾರ ಗಂಗಪ್ಪ ಅವರು ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲಿ 26 ಜಿಲ್ಲೆಗಳಲ್ಲಿ ಸಮಿತಿ ಸಕ್ರಿಯವಾಗಿದೆ ಎಂದು ಹೇಳಿದರು. ಹಿಂದುಳಿದ, ತಳ ಸಮುದಾಯಗಳ ವಿದ್ಯಾವಂತ ಯುವಕರಲ್ಲಿ ಜಾಗೃತಿ ಮೂಡಿಸಲು ಸಮಿತಿ ಶ್ರಮಿಸುತತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಸೋಮಪ್ಪ ಛಲವಾದಿ, ಜಿಲ್ಲಾ ಸಂಚಾಲಕ ಬೈಲೂರು ಮಲ್ಲಿಕಾರ್ಜುನ, ಆರ್.ಪಿ.ಐ.ನ ಜಿಲ್ಲಾ ಸಂಚಾಲಕ ಎಸ್ ಎಂ ಶ್ರೀನಿವಾಸ್, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ನ್ಯಾಯವಾದಿ, ಶ್ರೀಮತಿ ಸುನಿತಾ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.