ಮಾನಸ ಗಂಗೆ
‘ಮಾನಸಗಂಗೆ’ ಕಾವ್ಯನಾಮದಲ್ಲಿ ಅರ್ಥಪೂರ್ಣ ಹನಿಗವನ ರಚಿಸುತ್ತಿರುವ ಶ್ರೀಮತಿ
ಶಶಿರೇಖಾ ನಾಗೇಶ್ ಅವರು ತಿಪಟೂರಿನವರು.
ಮಗ್ಗವನ್ನೇ ನಂಬಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ಮಾನಸ ಗಂಗೆ ಅವರು ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ.
ಇಂದಿನ “ಅನುದಿನ ಕವನ”ದ ಗೌರವಕ್ಕೆ
ಕವಯತ್ರಿ ಮಾನಸ ಗಂಗೆ ಅವರ ಅವರ ಹನಿಗವನಗಳು ಪಾತ್ರವಾಗಿವೆ.👇
ಇಂದಿಗೂ
ನಕ್ಕಂತೆ ನಟಿಸುವುದನ್ನ
ಬದುಕಷ್ಟೆ ಕಲಿಸಿದೆ….
ನಾನು,
ನೀ ಹೊಗಳಿ ಬರೆಯುವ
ಬಳ್ಳಿಯ ಮೊಗ್ಗಲ್ಲ ದೊರೆ,
ತಿಳಿದಿರಲಿ ನಿನಗೆ
ಮುಳ್ಳೊಂದೆ ನನ್ನ
ಖಾಸಾ ಸಂಬಂಧಿ…
ಲೋಕದ ನಿಂದನೆಗೆ
ನೊಂದಿದ್ದು ಕಡಿಮೆ
ನಿನ್ನ ಸ್ಪಂದನೆಗೆ
ಕಾದಿದ್ದೆ ಹೆಚ್ಚು…..
ನೇಕಾರನ
ಬೆವರ ಹನಿಯೇ
ನೇಯ್ಗೆ ಮನೆಯ
ಸುಗಂಧ ದ್ರವ್ಯ …
***
ದೇವರೂ
ಸರತಿಸಾಲಿನಲ್ಲಿ
ನಿಲ್ಲುತ್ತಾನೇ
ನೇಕಾರನ ಮನೆಯ ಮುಂದೆ …
***
ಬೆಸೆವ ನೂಲು
ಸವೆದು ಹೋಗಬಾರದೆಂದು
ಗಂಟು ಬಿಗಿಯುತ್ತಾನೆ
ತುಂಡಾದ ಎಳೆಗೆ…
***
ಒಪ್ಪ ಓರಣವಿಲ್ಲ
ಹಸಿರು ತೋರಣವಿಲ್ಲ
ನೇಕಾರನ ಮನೆಯಲ್ಲಿ
ದಿನವು ಹಬ್ಬ…
***
ಸೂರ್ಯನ ಸಣ್ಣ ಕಿರಣಗಳಿಗೆ
ಮುಖವೊಡ್ಡಲು ಹೆದರುತ್ತಿದ್ದವಳೀಗ
ಬೆಂಕಿಯಲ್ಲಿ ಅರಳಿದ ಹೂವು….
***
ಲೆಕ್ಕವಿಲ್ಲದಷ್ಟು
ಒಲವ ಮಾತುಗಳ
ಕೊಟ್ಟು ಪಡೆದಿದ್ದೆವು
ಉಳಿದದ್ದು ಮಾತ್ರ
ನಾನು ನೀನು….
***
ನಿನ್ನ ಪ್ರೀತಿ
ಪಡೆಯುವುದರಲ್ಲಿ
ನಾ ಅಂದು ಸೋತಿದ್ದಕ್ಕೆ
ಇಂದು ಬದುಕಿದ್ದೇನೆ
ನಿನ್ನ ನೆನಪುಗಳು
ನನ್ನನ್ನು ಬದುಕಿಸಿವೆ…..
***
ಒಲವ ಹಾದಿಯಲಿ
ಹಿಡಿದ ಕೈ ಸಡಿಲಿಸದಿರು
ಇನ್ನೊಂದಿಷ್ಟು ದೂರ
ನಡೆದು ಬಿಡುವ
ಹೆಚ್ಚೇನಿಲ್ಲ ,
ಆಯಸ್ಸು ಮುಗಿಯುವ
ತನಕ ಅಷ್ಟೇ.
*ಮಾನಸ ಗಂಗೆ*✍
*****