ನಮ್ಮ ನಿಮ್ಮೆಲ್ಲರ ಪ್ರೀತಿಯ ‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 50 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ಐವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ನಮ್ಮದು.
ಇಂದಿನ 50ನೇ “ಅನುದಿನ ಕವನ”ದ ಗೌರವಕ್ಕೆ ಕವಿ ಶ್ರೀ ಮನಂ ಅವರ ‘ನಾನೆಂದು ದಾರಿ ತಪ್ಪಲಾರೆ’ ಕವಿತೆ ಪಾತ್ರವಾಗಿದೆ. ವಿಶೇಷವೆಂದರೆ ಕಳೆದ ತಿಂಗಳವಷ್ಟೇ ಈ ಕವಿತೆ ರಾಗ ಸಂಯೋಜನೆಗೊಂಡು ಸಾಹಿತ್ಯ-ಸಂಗೀತ ಪ್ರಿಯರ ಮನಸೂರೆಗೊಂಡಿದೆ.
ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ನಿ) ಡಾ. ಸುಭಾಷ್ ಭರಣಿ, ಹಿರಿಯ ಪತ್ರಕರ್ತರಾದ ಎಂ ಅಹಿರಾಜ್, ಸ್ನೇಹಪ್ರಿಯ ನಾಗರಾಜ್, ಪರಿಸರವಾದಿ ಸಂತೋಷ್ ಮಾರ್ಟಿನ್ ಸೇರಿದಂತೆ ಹಲವರು ಈ ಪದ್ಯವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದಾರೆ.
ಮನಂ ಅವರ ‘ನಾನೆಂದೂ ದಾರಿ ತಪ್ಪಲಾರೆ’ ಕವಿತೆಗೆ ಹಗರಿಬೊಮ್ಮನಹಳ್ಳಿಯ ಪ್ರತಿಭಾವಂತ ಸಂಗೀತ ಶಿಕ್ಷಕಿ ಶ್ರೀಮತಿ ಶಾರದ ಕೊಪ್ಪಳ ಅವರು ರಾಗ ಸಂಯೋಜಿಸಿ ಹಾಡಿದ್ದಾರೆ.
ಯುವ ಪ್ರತಿಭೆ ಹಗರಿಬೊಮ್ಮನಹಳ್ಳಿಯ ಪ್ರದೀಪ್ ಅಕ್ಕಸಾಲಿ ಅವರು ವಯೋಲಿನ್, ಮೊರಿಗೇರಿಯ ಯುವ ಪ್ರತಿಭೆ ಸಿ.ಕೊಟ್ರೇಶ್ ಅವರು ತಬಲ ಸಾಥ್ ನೀಡಿದ್ದಾರೆ. ಜತೆಗೆ ಉದಯೋನ್ಮುಖ ಯುವ ಗಾಯಕಿಯರಾದ ಹಗರಿಬೊಮ್ಮನಹಳ್ಳಿಯ ಗಾಯತ್ರಿ ಮತ್ತು ವರ್ಣಿಕಾ ಅವರು ಸಹ ಗಾಯಕರಾಗಿ ಗಮನ ಸೆಳೆದಿದ್ದಾರೆ.👇
ನಾನೆಂದೂ ದಾರಿ ತಪ್ಪಲಾರೆ
*****
ನನ್ನ ಮೊಗದ ಮೇಲೆ
ಸದಾ ಕಿರುನಗೆ ಇರುವಾಗ
ನಾನೆಂದೂ ದಾರಿ ತಪ್ಪಲಾರೆ //
ನನ್ನ ಕಿರುನಗೆ ದಾರಿಹೋಕರಲ್ಲಿ
ಕಿರುನಗೆ ಮೂಡಿಸುತಿರುವಲ್ಲಿ
ನಾನೆಂದೂ ದಾರಿ ತಪ್ಪಲಾರೆ//
ನಾನು ದಾರಿ ತಪ್ಪಿದಾಗಲೆಲ್ಲಾ
ನನಗೆ ದಾರಿ ತೋರುವವರಿರುವಾಗ
ನಾನೆಂದೂ ದಾರಿ ತಪ್ಪಲಾರೆ//
ನನಗೆ ನಡೆದಾಡಲೊಂದು ದಾರಿ
ಸದಾ ನಮ್ಮ ಜಗದೊಳಿರುವಾಗ
ನಾನೆಂದೂ ದಾರಿ ತಪ್ಪಲಾರೆ//
..🖋️ಮನಂ