ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಸಂವಾದ: ನಿಶ್ಚಿತ ಗುರಿಯಿರಲಿ;ಸಾಧಿಸುವವರೆಗೆ ವಿಶ್ರಮಿಸದಿರಿ: ಡಿಸಿ ಮಾಲಪಾಟಿ

ತಿಮ್ಮಲಾಪುರ(ಹೊಸಪೇಟೆ ತಾ.):
ಗುರಿ ಸಾಧಿಸಲೇಬೇಕು ಅಂತ ಅಂದುಕೊಂಡರೇ ಹಾಗೆಯೇ ಆಗ್ತೀರಿ..ಪರಿಪೂರ್ಣ ಯೋಜನೆ,ಬದ್ಧತೆ, ಸಾಧಿಸುವೆಡೆ ಅವಿರಶತ ಶ್ರಮ, ಒಳ್ಳೆಯ ಗುರಿ ಸಾಧಿಸುವ ಕನಸಿರಬೇಕು;ಅದನ್ನು ಸಾಧಿಸುವ ನಿರಂತರ ಶ್ರಮ ಇರಬೇಕು;ಅಂದಾಗ ಖಂಡಿತ ಗುರಿ ಸಾಧಿಸ್ತೀರಿ…ಇದಕ್ಕೆ ನಾನೆ ಉದಾರಣೆ…
ಹೀಗೆಂದು ಹೇಳಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು.
“ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ” ಕಾರ್ಯಕ್ರಮದ ನಿಮಿತ್ತ ತಿಮ್ಮಲಾಪುರದಲ್ಲಿ ಗ್ರಾಮವಾಸ್ತವ್ಯಕ್ಕಾಗಿ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಪಿಯು ವಿಜ್ಞಾನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಆರಂಭದಲ್ಲಿ ಒಳ್ಳೆಯ ಅಂಕಗಳು, ನಂತರ ಕಡಿಮೆ ಅಂಕಗಳು ಹಾಗೂ ವೈಫಲ್ಯ, ನಂತರ ಗುರಿಯಿಡೆಗೆ ಸಾಧಿಸಲು ನಡೆಸಿದ ಹಾರ್ಡ್ ವರ್ಕ್ ನಿಂದ ದೇಶದಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 53ನೇ ರ್ಯಾಂಕ್ ಬರಲು ಸಾಧ್ಯವಾಯಿತು ಎಂದರು.
ಏನೇ ಸಮಸ್ಯೆ ಬಂದ್ರೂ ಹಂಚಿಕೊಳ್ಳಬೇಕು; ಒಳ್ಳೆಯ
ಸ್ನೇಹಿತರಿರಬೇಕು. ಒಂದೇ ಪರೀಕ್ಷೆಯಲ್ಲಿ ವಿಫಲವಾದ ತಕ್ಷಣ ಎಲ್ಲವೂ ಮುಗಿಯುವುದಿಲ್ಲ ಎಂದರು.
ದೇಶದ ಬಗ್ಗೆ ಪ್ರೀತಿ ಇದ್ದಾಗ, ಜೀವನದಲ್ಲಿ ನೈತಿಕತೆ ಅಳವಡಿಸಿಕೊಂಡರೆ ಭ್ರಷ್ಟಾಚಾರ ಎನ್ನುವುದು ತನ್ನಿಂದ ತಾನೇ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮಗಳ ಅಭಿವೃದ್ಧಿ ಅನ್ನುವುದು ದಿಢೀರ್ ಮಾಡುವಂತದ್ದಲ್ಲ;ಅದಕ್ಕೂ ಸಮಯಹಿಡಿಯುತ್ತದೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಪ್ರಶ್ನೆ ಕೇಳುವ ವಿದ್ಯಾರ್ಥಿಗಳು ಶಾಲೆಯ ಸಮಸ್ಯೆಗಳನ್ನು ಬಿಂಬಿಸುತ್ತಾರೆ ಎಂದು ಭಾವಿಸಿದ್ದೆ, ಆದರೇ ತಾವು ಗುರಿಗಳತ್ತ ಸಾಗಲು ಹಾಗೂ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಶ್ನೆಗಳು ಕೇಳಿರುವುದು ಖುಷಿಯಾಯಿತು ಎಂದು ಪ್ರಶಂಸಿಸಿದರು.
ಅನಂತಪುರ‌ ಜಿಲ್ಲೆಯ ಅತ್ಯಂತ ಹಿಂದುಳಿದಿರುವ ಗ್ರಾಮ ನನ್ನೂರು. 1998ರಲ್ಲಿ 8ನೇ ತರಗತಿ ಓದುವಾಗ ಓರ್ವ ಕಲೆಕ್ಟರ್ ಬಂದು ಪರಿಪೂರ್ಣ ಪ್ಲಾನ್ ಮಾಡಿ ಇಡೀ ಎಸ್ಸೆಸ್ಸೆಲ್ಸಿಯ ಪರೀಕ್ಷೆಯ ಫಲಿತಾಂಶ ಬದಲಾಯಿಸಿದ್ದನ್ನು ಈ ಸಂದರ್ಭದಲ್ಲಿ ಮಾಲಪಾಟಿ ಅವರು ಸ್ಮರಿಸಿದರು..
ಅಪರ ಜಿಲ್ಲಾಧಿಕಾರಿ ‌ಪಿ.ಎಸ್.ಮಂಜುನಾಥ ಅವರು ಮಾತನಾಡಿ ಸಂಸ್ಕ್ರತಿ ಮತ್ತು ಶಿಕ್ಷಣ ಎರಡು ಮುಖ್ಯವಾಗಿವೆ. ಲಿಂಗತಾರತಮ್ಯದ ಕುರಿತು ಪೋಷಕರಿಗೆ ಅರಿವು ಮೂಡಿಸಬೇಕು ಎಂದರು.
ತಾವು ಭವಿಷ್ಯದ ಆಸ್ತಿಗಳು;ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೇರಿದ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕೆ ಶ್ರಮಿಸಿ ಎಂದರು.
ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮಾತನಾಡಿದರು.
ವಿದ್ಯಾರ್ಥಿಗಳು ವಿವಿಧ ಪ್ರಶ್ನೆಗಳನ್ನು ಕೇಳಿದರು.
ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ,ತಹಸೀಲ್ದಾರ್ ವಿಶ್ವನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಮತ್ತಿತರರು ಇದ್ದರು.