ಅನುದಿನ ಕವನ-೫೩ (ಕವಿ:ಅಮರಗುಂಡಪ್ಪ ಹೂಗಾರ)

ಕವಿ ಪರಿಚಯ:
ಹೆಸರು: ಅಮರಗುಂಡಪ್ಪ ಹೂಗಾರ,
ಕಾವ್ಯನಾಮ: ಒಂಟಿಸವಾರಿ,
ವಿದ್ಯಾಭ್ಯಾಸ : ೭ ನೇ ತರಗತಿ, ವಯಸ್ಸು: ೬೦,
ತಂದೆ : ದೇವೇಂದ್ರಪ್ಪ ಹೂಗಾರ, ತಾಯಿ : ನೀಲಮ್ಮ,
ವಿಳಾಸ: ಸಾ: ಹುಲ್ಲೂರ, ತಾ: ಮಸ್ಕಿ, ಜಿ: ರಾಯಚೂರ. ೫೮೪೧೩೮.
ವೃತ್ತಿ: ಗ್ರಾಮದೇವತೆಯ ಅರ್ಚಕರು ಹಾಗು ಹೂಗಾರ ಕುಲಕಸುಬು ಮತ್ತು ಒಕ್ಕಲುತನ ಹಾಗು ಶರಣರ ಒಡನಾಟ.
ಹವ್ಯಾಸ : ಆಧ್ಯಾತ್ಮಿಕ ಗ್ರಂಥಗಳ ಓದುವುದು ಹಾಗು ಹಲವಾರು ಕಡೆಗಳಗಳಲ್ಲಿ ಹಿತ ಚಿಂತನಗೋಷ್ಠಿಗಳಲ್ಲಿ ಭಾಗಿಯಾಗಿ ಉಪನ್ಯಾಸ, ಇತರರಲ್ಲಿ ಸಾಹಿತ್ಯ ಹವ್ಯಾಸ ಬೆಳೆಸುವುದು, ಧಾರ್ಮಿಕ ವಿಚಾರ ಮೂಡಿಸುವುದು. ೨೦೧೯ ರಲ್ಲಿ ಬಳ್ಳಾರಿಯ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ದೇವಿ ಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಚನ ನೀಡಿದ್ದಾರೆ. ೨೦೨೦ರಲ್ಲಿ ಯಾದಗಿರಿ ಜಿಲ್ಲೆ, ವಡಗೇರಾ ತಾಲ್ಲೂಕಿನ ಕೋನಹಳ್ಳಿ ಮಠದಲ್ಲಿ ಪುರಾಣ ಹೇಳಿದ್ದಾರೆ.
ಶಾಲಾ ಮಕ್ಕಳಿಗೆ ಶಿಕ್ಷಣದ ಮಹತ್ವ, ಜೀವನದ ಮೌಲ್ಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ೪೬೬ ಕ್ಕೂ ಹೆಚ್ಚು ಉಪನ್ಯಾಸ ನೀಡಿರುವುದು ವಿಶೇಷ.
ಇವರ ಸಾಹಿತ್ಯ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳ ವಿಶಿಷ್ಟ ಸೇವೆ ಪರಿಗಣಿಸಿ ಗುಲ್ಬರ್ಗಾ ಸೇರಿದಂತೆ ಹಲವು ಗ್ರಾಮ ಪಟ್ಟಣಗಳಲ್ಲಿ ಅಮರ ಗುಂಡಪ್ಪ ಅವರನ್ನು ಸನ್ಮಾನಿಸಿ
ಗೌರವಿಸಲಾಗಿದೆ.
ಪ್ರಕಟಣೆಗಳು:
೧) ವಚನ ಕೃತಿಗಳು, ೨) ನುಡಿಮುತ್ತುಗಳು, ೩) ಭಜನಾ ಹಾಡುಗಳು, ೪) ಕವನಗಳು, ೫) ವ್ಯಕ್ತಿಗಳ ಕುರಿತು ರಚಿಸಿದ ಲೇಖನಗಳ ಕೃತಿ, ೬) ೮೦೦ ಕ್ಕೂ ಹೆಚ್ಚು ವಚನಗಳು ಮುದ್ರಣಕ್ಕೆ ಸಿದ್ದವಾಗಿವೆ.
೨೦೦೩-೦೪ ರಲ್ಲಿ ರಾಯಚೂರು ಆಕಾಶವಾಣಿ ಕೇಂದ್ರದಿಂದ ವೈಚಾರಿಕ ಚಿಂತನಗಳು ಪ್ರಸಾರವಾಗಿವೆ.

ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ‘ಡಾ. ಸತೀಶಕುಮಾರ ಹೊಸಮನಿ’ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಕವಿತೆ ಪಾತ್ರವಾಗಿದೆ.👇

ಡಾ. ಸತೀಶಕುಮಾರ ಹೊಸಮನಿ ನೋಡಿ ಕಲಿ
******
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ
ಖೇರ್ಡಾ(ಬಿ) ಗ್ರಾಮ ತಾಯಿ ಮಾಪಮ್ಮಾ
ತಂದೆ ಶಂಬುಲಿಂಗ ಹೊಸಮನಿ ಇವರ
ಪವಿತ್ರ ಗರ್ಭದಿ ಜನಿಸಿದ ಸುಪುತ್ರನೆ
ಡಾ. ಸತೀಶಕುಮಾರ ಎಸ್. ಹೊಸಮನಿ ನಿಮಗೆ
ಕನ್ನಡಾಂಬೆಯ ಕೃಪಾ ಕಟಾಕ್ಷವುಂಟು (೧)

ಹೊಸಮನಿ ಎಂಬುದು ಅಂತಿಂತ ಮನಿಯಲ್ಲ
ಹೊಸ ಮನಿಯ ನಾಮವು ಎಲ್ಲರಿಗೂ ದೊರಕದು
ಹೊಸ ಮನಿಯು ಯಾವತ್ತೂ ಮಾಸದ ಮನಿಯಲ್ಲ
ಹೊಸ ಮನಿಯವರ ಬದುಕು ಅಪ್ರತಿಮವಾದುದು
ಹೊಸಮನಿಯೊಳಗೆ ಪ್ರವೇಶ ಹಸನಾಗಿದ್ದವರಿಗುಂಟು
ಹೊಸಮನಿಯವರ ಮಹಾತ್ಸಾಧನೆಗಳಿಗೆ ಶರಣಾರ್ಥಿ(೨)

ಇವರ ಸಮಾಜ ಸೇವೆಯ ಪ್ರಾಮಾಣಿಕತೆಯು
ಇವರ ನಿರಂತರ ಪರಿಶ್ರಮದ ನಿಷ್ಠೆಯ ಗುರಿಯು
ಇವರ ಮನೋ ಭಾವನೆಗಳ ಪರಿ ಪಕ್ವತೆಯು
ಇವರ ಕ್ರಿಯಾಶೀಲತೆಗೆ ಅಪ್ಪಿದ ಬಸವನ ಕೃಪೆಯು
ಇವರ ಸಾಧನೆಗಳಿಗೆ ಸಿಕ್ಕ ಅನೇಕ ಪ್ರಶಸ್ತಿಗಳ ಸಂಖ್ಯೆಯು
ಇವರ ಕುರಿತು ನಾನೇನ ಬಣ್ಣಿಸಲಿ?
ನಾನೆಂದು ಹೇಳಲಿ? (೩)
ಜಂಬದ ವಿದ್ವಾಂಸರುಂಟು ಮತ್ತೆ ಬರಹಗಾರರುಂಟು
ಜಂಬದ ಮಾತುಗಳಾಡುವ ಪಂಡಿತರು ಯಾಕಿಲ್ಲ?
ಜಂಬವ ಬಿಡದೆ ನಡೆಯುವ ಬಡಿವಾರದರುಂಟು
ಜಂಬವ ಜಡ್ಡಿಗೆ ಬಲಿಯಾದ ಅಲ್ಪರು ಸಾಕಷ್ಟು ಉಂಟು
ಶಂಭುಲಿಂಗ ಹೊಸಮನಿಯವರ ಚೆಂದುಳ ಕಂದ
ಜಂಬವಿರದ
ಡಾ. ಸತೀಶಕುಮಾರನ ನೋಡಿ ಕಲಿ ನೀ(೪)

ನಾಡಿನ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾಗಿ
ನಾಡಿನ ನಾನಾ ಭಾಗಗಳಲ್ಲಿ ಶ್ರಮಿಸಿ ಜನಕೆ ಬೇಕಾಗಿ
ನಾಡಲ್ಲಿ ತಾನೂ ಒಬ್ಬ ಬಹುಮುಖ ಪ್ರತಿಭೆಯಾಗಿ
ನಾಡಿನ ಯುವ ಪೀಳಿಗೆಗೆ ಮಾರ್ಗದರ್ಶಿಗಳಾಗಿ
ನಾಡಿನ ಕನ್ನಡ ನುಡಿ ಭಾಷೆಗೆ ಸಂಪ್ರೀತರಾಗಿ
ನಾಡಲ್ಲಿರುವ ಹುಲ್ಲೂರೀಶ ನೊಲುಮೆಗೆ ಪಾತ್ರರಾಗಿ
ಡಾ. ಸತೀಶಕುಮಾರ ಹೊಸಮನಿಯವರ
ಶ್ರಮದ ಬದುಕನು ನೋಡಿ ಕಲಿ (೫)

-ಅಮರ ಗುಂಡಪ್ಪ ಹೂಗಾರ, ಹುಲ್ಲೂರ