ಅನುದಿನ ಕವನ-೫೬ (ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ)

ದುಡಿಮೆಯೇ ದೇವರು

ದುಡಿಮೆಯೇ ದುಡಿದವನಿಗೆ ದೇವರಾಗಬೇಕು
ದುಡಿಮೆ ಮಾಡಿದರೆ ದೇವರು ಸಿಗಬೇಕು
ದುಡಿಮೆಲ್ಲಿಯೇ ಕೈಲಾಸ ಕಾಣಬೇಕು.

ದುಡಿಮೆಯೆ ದುಡಿದವನ ತಾಯಾಗಬೇಕು
ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ನೀಡಬೇಕು
ಕಷ್ಟಬಂದಾಗ ಕರುಣೆಯಿಂದ ಕೈಹಿಡಿಯಬೇಕು.

ಬಾಳ ಬಂಡಿಗೆ ಗಂಡ ಹೆಂಡತಿ ಎತ್ತಾಗಬೇಕು
ಮುತ್ತಿನಂತ ಮಕ್ಕಳು ಮನೆಯಲ್ಲಿರಬೇಕು
ಬದುಕು ಸುಖ ಶಾಂತಿಯಿಂದ ಕೂಡಿರಬೇಕು.

ನಿತ್ಯ ಕಾಯಕ ಮರೆಯದೆ ಮಾಡಬೇಕು
ಸಾರಾಯಿ ಕುಡಿತದಿಂದ ದೂರವಿರಬೇಕು
ದುಡಿದುತಂದ ದುಡ್ಡಿನಿಂದ ಹೊಟ್ಟೆ ತುಂಬಬೇಕು

ದುಡಿವ ಕೈಗಳಲ್ಲಿ ಶಕ್ತಿಯಿರಬೇಕು
ದುಡಿದ ಮನಸಿಗೆ ನೆಮ್ಮದಿ ಸಿಗಬೇಕು
ಸುಖ ಸಂಸಾರಕ್ಕೊಂದು ಸೂರಿರಬೇಕು.

ಸುರಿವಮಳೆ ಭೂಮಿಗೆ ತಂಪೆರೆಯಬೇಕು
ದುಡಿದು ಸುರಿವ ಬೆವರು ಬಡತನವ ಕಳೆಯಬೇಕು
ಬಾಳಬಂಡಿ ಸಾಗಿಸಲು ದಾರಿಯಾಗಬೇಕು.

ಕತ್ತಲೆಯ ಕೂಪ ಕಳೆದು ಬದುಕಬೇಕು
ಮುಸುಕಿದ ಕತ್ತಲೆಯ ಪರದೆ ಹರಿಯಬೇಕು
ಬಡತನದ ನೋವನ್ನು ಮರೆಯಬೇಕು.

ಸುಖ ಸಂಸಾರಕ್ಕಾಗಿ ಶ್ರಮಿಸಬೇಕು
ಕತ್ತಿಮೇಲೆ ನಡೆದಂತ ನೋವು ಸರಿಸಬೇಕು
ನೆಮ್ಮದಿ ನೀಡೆಂದು ದೇವರಿಗೆ ನಮಿಸಬೇಕು.

-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಪ್ರಾಧ್ಯಾಪಕರು ಸರಕಾರಿ ಪದವಿ ಕಾಲೇಜು ಯಾದಗಿರಿ.
ಜಿಲ್ಲಾಧ್ಯಕ್ಷರು, ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ.