ಬಳ್ಳಾರಿ,ಫೆ.26: ಪೊಲೀಸ್ ಇಲಾಖೆ ವೃತ್ತಿ ಬದುಕಿಗೆ ಬೇಕಾದ ಶಿಸ್ತು, ವಿನಯತೆ ಮತ್ತು ಕಾನೂನಿನ ಬಗ್ಗೆ ವಿಚಾರಗಳ ಕುರಿತು ತರಬೇತಿ ನೀಡಿದೆ. ಈ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ(ಐಜಿಪಿ) ಎಂ.ನಂಜುಂಡಸ್ವಾಮಿ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ನಡೆದ ಬಳ್ಳಾರಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 15ನೇ ತಂಡದ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ತರಬೇತಿ ಶಾಲೆಯಿಂದ ನಿರ್ಗಮನವಾದ ಈ ದಿನ ನಿಮ್ಮ ಜೀವನ ಪೂರ್ತಿ ನೆನಪಿನಲ್ಲಿ ಇರುತ್ತದೆ; ನಿಮ್ಮ ತಂದೆ-ತಾಯಿ ಮತ್ತು ಪೋಷಕರಿಗೆ ಈ ಕ್ಷಣ ತುಂಬಾ ಖುಷಿ ಕೊಡುತ್ತದೆ. ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು.
ವೃತ್ತಿ ಮತ್ತು ಬದುಕಿಗೆ ಅವಶ್ಯಕ ಇರುವ ಮೂಲ ಅಂಶಗಳನ್ನು ತರಬೇತಿಯಲ್ಲಿ ಪೊಲೀಸ್ ಇಲಾಖೆ ತಿಳಿಸಿದೆ. ಇವುಗಳನ್ನು ಕೊನೆಯವರೆಗೆ ನಿಮ್ಮ ಜೀವನದಲ್ಲಿ ರೂಢಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಹೊಸ ಹೊಸ ವಿಚಾರ ಮತ್ತು ಕಾನೂನುಗಳನ್ನು ತಿಳಿದುಕೊಳ್ಳುವ ಮೂಲಕ ನಿಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದ ಐಜಿಪಿ ಅವರು ಕಲಿಕೆಗೆ ಅಂತ್ಯ ಎಂಬುದಿಲ್ಲ. ಜೀವನದ ಉದ್ದಕ್ಕೂ ಕಲಿಕಾ ಪ್ರಕ್ರಿಯೆ ನಿರಂತರವಾಗಿರುತ್ತದೆ. ನಿಮ್ಮ ಅಧ್ಯಯನ ನಿರಂತರವಾಗಿರಲಿ ಎಂದು ಹೇಳಿದರು.
.ಎಲ್ಲರ ಬಳಿ ಸ್ಮಾರ್ಟ್ ಫೋನ್ಗಳಿದ್ದು, ಇವುಗಳಿಂದ ಜ್ಞಾನ ಹೆಚ್ಚಿಸಿಕೊಳ್ಳ ಬಹುದು. ಕಾನೂನು, ಸಂವಿಧಾನ ಮತ್ತು ಕರ್ತವ್ಯ ನಿರ್ವಹಿಸುವ ಬಗೆ, ಪ್ರಚಲಿತ ವಿದ್ಯಾಮಾನಗಳ ಕುರಿತು ಮಾಹಿತಿ ಪಡೆಯಿರಿ ಎಂದು ಐಜಿ ಮನಂ ಅವರು ಸಲಹೆ ನೀಡಿದರು.
ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಬಿ.ಎನ್.ಲಾವಣ್ಯ ಅವರು ಮಾತನಾಡಿ, ಜೀವನ ಪೂರ್ತಿ ಒಂದು ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಒಂದೊಳ್ಳೆಯ ತರಬೇತಿ ಅತ್ಯಗತ್ಯ. ಅಂತೆಯೇ ಎಲ್ಲಾ ಪ್ರಶಿಕ್ಷಣಾರ್ಥಿಗಳು ಆತ್ಮ ವಿಶ್ವಾಸದಿಂದ ತರಬೇತಿ ಪಡೆದಿದ್ದಾರೆ ಎಂದು ಹೇಳಿದರು.
ಶಾಲೆಯಲ್ಲಿ ಪಡೆದ ತರಬೇತಿ ನಿಮ್ಮ ವೃತ್ತಿಯಲ್ಲಿ ನೆರವಾಗಲಿದೆ ಎಂದರು.
ಉತ್ತಮ ಕೌಶಲ್ಯ, ಶಿಸ್ತು ಮತ್ತು ದಕ್ಷತೆ ನಿಮ್ಮ ವೃತ್ತಿಯನ್ನು ಪರಿಪೂರ್ಣಗೊಳಿಸುವುದು. ಪೊಲೀಸ್ ಇಲಾಖೆಯಲ್ಲಿ ಮಹತ್ವವಾದ ಸಾಧನೆಗಳನ್ನು ಮಾಡುವ ಮೂಲಕ ಇತಿಹಾಸವನ್ನು ಬರೆಯಿರಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
15 ನೇ ತಂಡದಲ್ಲಿ 58 ಜನ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ: 1994 ರಿಂದ ಜಿಲ್ಲೆಯಲ್ಲಿ ತರಬೇತಿ ಶಾಲೆ ಆರಂಭವಾಗಿದ್ದು, ನಾಗರೀಕರ ಪೊಲೀಸ್ ಪಡೆಯ 11 ತಂಡಗಳು, ಸಶಸ್ತ್ರ ಪೊಲೀಸ್ ಮೀಸಲು ಪಡೆಯ 2 ತಂಡಗಳು ಮತ್ತು ನಾಗರೀಕ ಮಹಿಳಾ ಪೊಲೀಸ್ ಪಡೆಯ 2 ತಂಡಗಳನ್ನು ಒಳಗೊಂಡಂತೆ ಇದುವರಗೆ 15 ತಂಡಗಳು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿವೆ ಎಂದು ಲಾವಣ್ಯ ಅವರು ಮಾಹಿತಿ ನೀಡಿದರು.
15 ನೇ ತಂಡದಲ್ಲಿ 58 ಜನ ಪ್ರಶಿಕ್ಷಣಾರ್ಥಿಗಳು ತರಬೇತಿಯನ್ನು ಪಡೆದಿದ್ದಾರೆ ಎಂದರು.
ತರಬೇತಿಯ ಅವಧಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಅಪರಾಧದ ಸ್ಥಳ ಪರಿಶೀಲನೆ, ಸೈಬರ್ ಅಪರಾಧ ತಡೆಗಟ್ಟುವಿಕೆ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಕಾಯ್ದೆ, ಸಂಚಾರಿ ವ್ಯವಸ್ಥೆಯ ಬಗ್ಗೆ ತಿಳಿಸುವುದರ ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆಯ ವಿವಿಧ ಕೆಲಸಗಳ ಕಾರ್ಯನಿರ್ವಹಣೆ, ನ್ಯಾಯಾಲಯ, ಜಿಲ್ಲಾ ಕಾರಾಗೃಹ, ಜಿಲ್ಲಾಸ್ಪತ್ರೆ ಮತ್ತು ಬಳ್ಳಾರಿ ಜಿಲ್ಲೆಯ ಐತಿಹಾಸಿಕ ತಾಣಗಳ ಬಗ್ಗೆ ಪರಿಚಯ ಮಾಡಲಾಗಿದ್ದು, ಭದ್ರತಾ ವ್ಯವಸ್ಥೆ, ಯೋಗ ಮತ್ತು ಕರಾಟೆಯ ಕುರಿತು ತರಬೇತಿ ನೀಡಲಾಗಿದೆ ಎಂದು ಎಎಸ್ಪಿ ಅವರು ವಿವರಿಸಿದರು.
ತರಬೇತಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರಶಿಕ್ಷಣಾರ್ಥಿಗಳ ವಿವರ:
ತರಬೇತಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ವಿಜಯಪುರ ಜಿಲ್ಲೆಯ ಸಾವಿತ್ರಿ, ಬೆಳಗಾವಿ ಜಿಲ್ಲೆಯ ಶಿವಲೀಲಾ ಬಿರಾದಾರ, ಸಾಂವಕ್ಕಾ ಗದಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೋಜಾ ಎಂ., ಚಿಕ್ಕ ಬಳ್ಳಾಪುರ ಜಿಲ್ಲೆಯ ಸುಮಾ ಕೆ., ಬೆಳಗಾವಿಯ ಅಕ್ಷತಾ ಬಾಡದವರ, ಚಿಕ್ಕಬಳ್ಳಾಪುರ ಜಿಲ್ಲೆಯ ಪೂಜಾ ಮಂಡಲ್, ತುಮಕೂರು ಜಿಲ್ಲೆಯ ಬಿಂದುಶ್ರೀ ಕೆ. ಮತ್ತು ಡಿಜಿ ಮತ್ತು ಐಜಿಪಿ ಪ್ರಶಸ್ತಿಯನ್ನು ಪಡೆದ ವಿಜಯಪುರ ಜಿಲ್ಲೆಯ ಸಾವಿತ್ರಿ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಮತ್ತು ಇತರರು ಇದ್ದರು.