ಅನುದಿನ ಕವನ-೫೭ (ಕವಯತ್ರಿ: ಧರಣೀ ಪ್ರಿಯೆ, ದಾವಣಗೆರೆ) ಕವನ ಶೀರ್ಷಿಕೆ:ಮಿನುಗು ತಾರೆ

ಕವಯತ್ರಿ ‘ಧರಣೀ ಪ್ರಿಯೆ’ ಅವರ ಕಿರು ಪರಿಚಯ👇
*****
ಹೆಸರು: ಎಂ.ಗೀತತಿಪ್ಪೇಸ್ವಾಮಿ ಐಗೂರು.
ಕಾವ್ಯ ನಾಮ: ಧರಣೀ ಪ್ರಿಯೆ
ವೃತ್ತಿ: ಗೃಹಿಣಿ
ಹವ್ಯಾಸಗಳು: ಕಥೆ.ಕವನ.ಓದುವುದು
ಕವನ ಬರೆಯುವುದು,ರುಬಾಯಿ,ಮುಕ್ತಕ ಬರೆಯುವುದು,ಕಥೆ,ಕಾದಂಬರಿ ಬರೆಯುವುದು,ಟೈಲರಿಂಗ್,ಡ್ರಾಯಿಂಗ್,ಪೇಂಟಿಂಗ್ ಮಾಡುವುದು,ಸೀರೆಗೆ ಕುಚ್ಚುಹಾಕುವುದು,ತ್ರಡ್ವರ್ಕಮಾಡುವುದು,ಷಟ್ದಿಗಳನ್ನು ರಚಿಸುವುದು,ಜಾನಪದ ಹಾಡುಗಳನ್ನು ಹಾಡುವುದು.
ಅಭಿನಯ(ಮುಕ್ತಿ ಕಿರುಚಿತ್ರದಲ್ಲಿ ನಟಿಸಿರುವರು)

ಕವಿಗೋಷ್ಠಿ: ಪ್ರಸಿದ್ಧ ಹಂಪಿ ಉತ್ಸವ-2019 ಹಾಗೂ ಜಾನಪದ ಸಂಗೀತೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಧರಣಿಪ್ರಿಯೆ ಅವರದು.
.ದಾವಣಗೆರೆ ಮಹಾನಗರ ಪಾಲಿಕೆ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ.
ಹಲವು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಿಸಿ ಗಮನ ಸೆಳೆದಿದ್ದಾರೆ.
*ಕೃತಿಗಳು* :”ಕಾನನದ ಕುಸುಮ”,ಕವನ ಸಂಕಲನ
“ಹೇ ಅಲ್ಲ ಏ”ಜುಗಲ್ ಬಂದಿ ಕವನ ಸಂಕಲನ,
“ಸೊಬಗು”ಕವನ ಸಂಕಲನ ಮುದ್ರಣ ಹಂತದಲ್ಲಿದೆ.
150 “ಭಾಮಿನಿ ಷಟ್ಪದಿಗಳನ್ನು” ರಚಿಸಿ ಸಂಗ್ರಹಿಸಿದ್ದಾರೆ.

ಇವರು ಬಳ್ಳಾರಿ (ಜಿ) ಹರಪನಹಳ್ಳಿ (ತಾ) ತೆಲಿಗಿ ಗ್ರಾಮದಲ್ಲಿ 10/07/1979 ರಲ್ಲಿ ಜನಿಸಿರುವರು.
ತಂದೆ:ಬಿ.ಮಲ್ಲಪ್ಪ.ಸೋಗಿ.
ತಾಯಿ:,ಕೊಟ್ರಮ್ಮ.
ವಿಳಾಸ:ಎಂ.ಗೀತಕುಮಾರಿ.
ಪತಿ: ತಿಪ್ಪೇಸ್ವಾಮಿ.ಐಗೂರು.
ತಿಪ್ಪೇರುದ್ರ ಸ್ವಾಮಿ ಕೃಪ.
1ನೇ ಮುಖ್ಯರಸ್ತೆ.6ನೇ ಅಡ್ಡರಸ್ತೆ,
ನಿಟುವಳ್ಳಿ.ಹೊಸ ಬಡಾವಣೆ.
ಹೆಚ್.ಕೆ.ಆರ್.ಸರ್ಕಲ್.
ದಾವಣಗೆರೆ
*****
ಅಶು ಕವಯತ್ರಿಯಾಗಿರುವ ಧರಣೀ ಪ್ರಿಯೆ ಅವರು ಮಕ್ಕಳು, ಸಾಧಕರ ಫೋಟೋ ಗಮನಿಸಿ, ಸ್ವಲ್ಪ ಮಾಹಿತಿ ಸಿಕ್ಕರೂ ಭಾಮಿನಿ ಷಟ್ಪದಿಯಲ್ಲಿ ಕವನ ರಚಿಸುವಲ್ಲಿ ಸಿದ್ಧ ಹಸ್ತರು.
ಇಂದಿನ ಅನುದಿನ ಕವನದ ಗೌರವಕ್ಕೆ ಧರಣೀ ಪ್ರಿಯೆ ಅವರ ‘ಮಿನುಗು ತಾರೆ’ ಕವಿತೆ ಪಾತ್ರವಾಗಿದೆ.👇

ಮಿನುಗು ತಾರೆ
(ಭಾಮಿನಿ ಷಟ್ಪದಿಯಲ್ಲಿ)
*******************
ಆವ ಜನ್ಮದ ಪುಣ್ಯ ಫಲವೋ
ಯಾವ ಬಂಧವು ಬೆಸೆದುಕೊಂಡಿತು
ಕಾವ ನಿತ್ತನು ಹೆಣ್ಣು ಮಗುವನು ಖುಷಿಯ ಪಟ್ಟಿರಲು!
ಹಾವಭಾವದಿ ಸೆಳೆದು ಜನರನು
ಸಾವಕಾಶದಿ ವರುಷ ಕಳೆಯಲು
ತಾಯಿ ತಂದೆಗೆ ಶಾನೆ ಸಂತಸ ಮಗುವ ತುಂಟತನ!!

ಬೆರಗುಗೊಳ್ಳುವ ಚತುರೆ ಬಾಲೆಯು
ಹರನ ಲೀಲೆಗೆ ಸಾಟಿಯಾವುದು
ನೆರದ ಜನರಿಗೆ ಹರುಷ ತುಂಬುತ ಪುಟ್ಟಿ ನಲಿದಿರಲು!
ಕರೆದು ಮುತ್ತನು ಕೊಡುವ ತೆರನದಿ
ಪರರ ನೋಟವ ಸೆಳೆವ ಚೆಂದವು
ವರವ ಕೊಟ್ಟನು ನಮ್ಮಜನುಮದಿ ಹಿಗ್ಗಿ ಹೇಳಿದರು!!

ಚೆಲುವೆ ನೋಡಲು ಕೆಂಪು ತೊಗಲಿನ
ಸೆಳೆದು ಮೊಗದಲಿ ಮೊಂಡ ಮೂಗದು
ಹೊಳೆವ ಬಟ್ಟಲು ಕಣ್ಣಿನಂದವು ಚೆಲುವ ಕೆಂದುಟಿಯು!
ಎಳೆಯ ಬಾಲೆಯ ಹಸಿವನೀಗಿಸಿ
ಮೊಲೆಯ ಹಾಲನು ಕುಡಿಸಿ ತಣಿಸಲು
ಮಲಗಿ ಬಿಟ್ಟಳು ಚಿರದ ನಿದ್ರೆಗೆ ಜಾರಿ ಸಂಸ್ಕೃತಿಯು!

ಆರು ಬಲ್ಲರು ದೇವನಾಟವ
ಯಾರು ಹೇಳರುಮುಂದೆ ಬರುವುದ
ಯಾರ ಪೂಜೆಯ ಭಕ್ತಿಗೊಲಿಯಲು ಕರೆದ ಭಗವಂತ !
ಬಾರೆನೆನ್ನದೆ ಹೊರಟು ಬಿಟ್ಟಳು
ಪೋರಿ ಮಮತೆಯ ಮಡಿಲ ತೊರೆಯುತ
ಜಾರಿ ಬಂದಳು ಕೆಲವು ದಿನಗಳು ಮೆರೆಯಲೋಸುಗವೆ!!

ಕೊರಗಿ ಕೂರದೆ ಮಗಳ ಹೆಸರಲಿ
ಹರಿವ ದೃಗ್ಜಲವನ್ನು ತಡೆದರು
ವರುಷ ಪುಸ್ತಕಗಳನು ಲೋಕಾರ್ಪಣೆಯ ಮಾಡುತಲಿ!
ಮರೆಯದಂತಹ ಮುದ್ದು ಬಾಲಕಿ
ದೊರೆಯದಾಯಿತು ಬಾಳ ಪಯಣದಿ
ಜರುಗಿ ಹೋದವು ಹಲವು ವರುಷವು ಬದುಕು ಘನಘೋರ!

ಧರಣೀ ಪ್ರಿಯೆ
ದಾವಣಗೆರೆ
*****