ಅನುದಿನ ಕವನ-೬೧. (ಕವಯತ್ರಿ: ರಂಹೋ)

ಬೆಂಕಿ-ಬೆಳಕು-ಹಣತೆ
*****
ಬಣವೆಗೆ
ಬೆಂಕಿಯಿಕ್ಕುವವರೊಳಗೆ
ಅದೆಷ್ಟೊಂದು ಬೆಂಕಿ!?

ಬೆಂಕಿ ಬಿದ್ದ
ಬಣವೆಯೆದುರು
ಬಿಕ್ಕುವವನೊಳಗೆ
ಎಷ್ಟೊಂದು ಕುದಿ!?

ಬೆಂಕಿಯಿಟ್ಟವರ ಮನೆ
ಬೆಳಕಾಗಲಿ
ಎಂದು ನಿಟ್ಟುಸಿರಾದ
ಎದೆಯೊಳಗೆ
ಎಷ್ಟೊಂದು ವಿಷಾದ!?

ಎದೆಯ ಬೆಂಕಿಗೆ
ತುಪ್ಪ ಸುರಿದರೇನಂತೆ
ಬೆಂಕಿಯನ್ನುಂಡವರೇ
ಬೆಳಕು ಹಂಚುತ್ತಾರೆ

ಎಲ್ಲ ಇಲ್ಲಗಳ
ನಡುವೆಯೂ
ಬದುಕಿನ ಹಕ್ಕಿ
ಹಾಡುತ್ತದೆ

ಸೀಮೆಯಿರದ
ಪ್ರೀತಿಗಾಗಿ
ಹಂಬಲಿಸುವ ಲೋಕ
ಸರಹದ್ದುಗಳನ್ನೂ
ನಿರ್ಮಿಸುತ್ತದೆ!

ಬೆಳಕೆಂದರೆ
ಕರುಣೆ
ಇಳಿಯುತ್ತದೆ ಹೇಗಾದರೂ
ಕಣ್ಣುತೆರೆಯಬೇಕಷ್ಟೆ!

ನಲುಮೆ ಎಂದರೆ
ಮತ್ತೇನು!
ಕರುಳು ಕದಲುವಾಗ
ಹಿಡಿದ ಬೆರಳು!

ಅಮ್ಮ ಹಚ್ಚುತ್ತಿರುತ್ತಾಳೆ
ಹಣತೆ
ಕಾಪಿಡಬೇಕಷ್ಟೆ
ನಾವು ಅದರ ಘನತೆ!

ಯಾವ ಚೌಕಟ್ಟು
ಹಂಗುಗಳಾಚೆ
ಅನಂತವಾಗಿ ಚೆಲ್ಲಿಕೊಂಡ ಬಣ್ಣಕ್ಕೆ!

ಪ್ರೀತಿ ಸ್ಪರ್ಶಿಸುತ್ತದೆ
ಬಂಡೆಯನ್ನೂ….!

#ರಂಹೋ