ಜನ ಮಾನಸದಲ್ಲಿ ಉಳಿಯುವ ನೂರಾರು ಭಾವ ಗೀತೆಗಳು, ಶಿಶು ಗೀತೆಗಳನ್ನು ರಚಿಸಿದ ಜನಾನುರಾಗಿ ಕವಿ ಪ್ರೊ. ಎನ್. ಎಸ್ ಲಕ್ಷೀನಾರಾಯಣ ಭಟ್ಟರು ತಮ್ಮ 85ನೇ ವಯಸ್ಸಿನಲ್ಲಿ ಇಂದು(ಮಾ.6) ಬೆಳಿಗ್ಗೆ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು.
ಅನುವಾದ ಕ್ಷೇತ್ರದಲ್ಲೂ ಅನುಪಮಸೇವೆ ಸಲ್ಲಿಸಿದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಹುಡುಕಿಕೊಂಡು ಬಂದಿವೆ.
ಬಹುಮುಖ ವ್ಯಕ್ತಿತ್ವದ ಫ್ರೊ. ಎನ್.ಎಸ್.ಎಲ್ ಅವರ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ. ಕರ್ನಾಟಕ ಕಹಳೆ ಡಾಟ್ ಕಾಮ್ ಹಿರಿಯ ಜನಪ್ರಿಯ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದೆ.
ಇಂದಿನ ‘ಅನುದಿನ ಕವನ’ ದಲ್ಲಿ ಶ್ರೀಯುತರ ಜನಪ್ರಿಯ ಕಾವ್ಯದ ತುಣುಕುಗಳು ಹಾಗೂ ಪ್ರಸಿದ್ಧ ಶಿಶುಗೀತೆ ‘ಭಾಳ ಒಳ್ಳೇವ್ರು ನಮ್ ಮಿಸ್ಸು
ಏನ್ ಹೇಳಿದ್ರೂ ಎಸ್ಸೆಸ್ಸು’ ಪ್ರಕಟಿಸುವ ಮೂಲಕ ಹಿರಿಯ ಸಾಹಿತಿಗೆ ಭಾವಪೂರ್ಣ ನಮನ ಸಲ್ಲಿಸುತ್ತೇವೆ.
*****👇
ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೇ
ಅಮ್ಮನು ಬಡಿಸಿದ ಊಟದ ರುಚಿಯು ಗಮ್ಮನೆ ಕಾಡಿತ್ತೇ
ಅಣ್ಣನ ಕೀಟಲೆ, ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೇ!
ಎಂತಾ ಹದವಿತ್ತೇ?
ಹರಯಕೆ ಏನೋ ಮುದವಿತ್ತೇ?
*****
ನಿಂತ ನೀರ ಕಲಕಬೇಡಿ ಕಲ್ಲುಗಳೇ
ಹೂ ದಳಗಳ ಇರಿಯಬೇಡಿ ಮುಳ್ಳುಗಳೇ
ಏನಿದೆಯೋ ನೋವು ಅವಕೆ ತಮ್ಮದೇ
ಬಾಳಲಿ ಬಿಡಿ ತಮ್ಮಷ್ಟಕೆ ಸುಮ್ಮನೆ..
*****
‘ಭಾಳ ಒಳ್ಳೇವ್ರು ನಮ್ ಮಿಸ್ಸು….’
ಭಾಳ ಒಳ್ಳೇವ್ರು ನಮ್ ಮಿಸ್ಸು
ಏನ್ ಹೇಳಿದ್ರೂ ಎಸ್ಸೆಸ್ಸು
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲ ಫೇಮಸ್ಸು
ಜಾಣಮರಿ ಅಂತಾರೆ
ಚಾಕ್ಲೇಟಿದ್ರೆ ಕೊಡ್ತಾರೆ
ಬೆನ್ನು ತಟ್ಟಿ ಕೆನ್ನೆ ಸವರಿ
ಬೆಣ್ಣೆ ಕಂದ ಅಂತಾರೆ!
ಆಟಕ್ ಬಾ ಅಂತಾರೆ
ಆಟದ್ ಸಾಮಾನ್ ಕೊಡ್ತಾರೆ,
ಗೊತ್ತಿಲ್ದಂಗೆ ಆಟದ್ ಜೊತೆ
ಪಾಠಾನೂ ಕಲಿಸ್ತಾರೆ!
ನಮ್ಜೊತೇನೇ ಆಡ್ತಾರೆ
ಕೈ ಕೈ ಹಿಡಿದು ಹಾಡ್ತಾರೆ,
ಕೋತಿ ಕರಡಿ ಕಥೆ ಹೇಳಿ
ಸಿಕ್ಕಾಪಟ್ಟೆ ನಗಿಸ್ತಾರೆ
ನಮ್ ಸ್ಕೂಲಂಥ ಸ್ಕೂಲಿಲ್ಲ
ನಮ್ ಮಿಸ್ಸಂಥ ಮಿಸ್ಸಿಲ್ಲ
ಅಮ್ಮನ್ ಹಾಗೇ ಅವ್ರೂನೂ
ಬಿಟ್ ಬರಕ್ಕೆ ಮನಸಿಲ್ಲ.
-ಎನ್. ಎಸ್. ಲಕ್ಸ್ಮೀನಾರಾಯಣ ಭಟ್ಟ