ಪರಿಸರ ಪ್ರೇಮಿ ಸಂಜಯ್ ಹೊಯ್ಸಳ ಅವರ ಪರಿಸರದ ಕುರಿತು ಜಾಗೃತಿ ಉಂಟುಮಾಡುವ ‘ನಾನು ಪ್ಲಾಸ್ಟಿಕ್’ ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ.👇
ನಾನು ಪ್ಲಾಸ್ಟಿಕ್
(ಪರಿಸರ ಕವನ)
ಸುಟ್ಟರೆ ವಿಷಗಾಳಿಯಾದೆ
ಆಸ್ತಮಾ,ಕ್ಯಾನ್ಸರ್ ತರುವೆ,
ಕೆಲವೊಮ್ಮೆ ಸಂತಾನ ಸಮಸ್ಯೆ ತರುವೆ,
ಇಷ್ಟಾದರೂ ನನ್ನನ್ನು ಬಿಡದೆ ಹಿಡಿದೆ!
ನಿನ್ನ ಔದಾರ್ಯ ಬಲು ದೊಡ್ಡದು ,
ಭಲೇ ಮಾನವ!!
ಹೂಳಿದರೆ ಅಂತರ್ಜಲಕ್ಕೆ ಹಾನಿ ತರುವೆ,
ಹಳ್ಳಿ ನಗರಗಳ ಸ್ವಚ್ಛತೆಗೆ ಭಂಗ ತರುವೆ,
ನೀರಿನ ಮೂಲಗಳಾದ ಹಳ್ಳ, ನದಿ, ಕೆರೆಗಳ
ಜಲಚರಗಳ ಸಾಯಿಸಿ,
ಅವುಗಳ ಆರೋಗ್ಯ ಹಾಳುಗೆಡಸುವೆ…
ಇಷ್ಟಾದರೂ ನನ್ನ ಬಿಡದೆ ಹಿಡಿದೆ
ನಿನ್ನ ಔದಾರ್ಯ ಬಲು ದೊಡ್ಡದು
ಭಲೇ ಮಾನವ!!
ಮಳೆಗಾಲದಲ್ಲಿ ಸೊಳ್ಳೆಗಳಿಗೆ ಆಶ್ರಯ ನೀಡಿ
ನಿನಗೆ ಮಾರಕ ರೋಗಗಳ ತರುವೆ,
ಪಶುಗಳ ಉದರ ಹರಿದೆ,
ಪಕ್ಷಿಗಳ ಅಧರ ಇರಿದೆ,
ಇಷ್ಟಾದರೂ ನನ್ನ ಬಿಡದೆ ಹಿಡಿದೆ!
ನಿನ್ನ ಔದಾರ್ಯ ಬಲು ದೊಡ್ಡದು,
ಭಲೇ ಮಾನವ!!
ಹಲವು ವನ್ಯಜೀವಿಗಳ ಸಾವಿಗೆ
ಕಾರಣವಾಗುತ್ತಿರುವೆ,
ಹಸಿರು ಮನೆ ಅನಿಲಗಳನ್ನು ಅಪಾರ
ಪ್ರಮಾಣದಲ್ಲಿ ಬಿಡುಗಡೆ ಮಾಡಿ
ನಿಮ್ಮನ್ನೆಲ್ಲ ಓಜೋನ್ ನಾಶ, ಜಾಗತಿಕ
ತಾಪಮಾನ ಏರಿಕೆ, ಹವಾಮಾನ ವೈಪರೀತ್ಯ
ದಂತಹ ಗಂಭೀರ ಸಮಸ್ಯೆಗಳಲ್ಲಿ ಬಂಧಿಸುತ್ತಿರುವೆ,
ಇಷ್ಟಾದರೂ ನನ್ನ ಬಿಡದೆ ಹಿಡಿದೆ!
ನಿನ್ನ ಔದಾರ್ಯ ಬಲು ದೊಡ್ಡದು,
ಭಲೇ ಮಾನವ!!
– ಸಂಜಯ್ ಹೊಯ್ಸಳ, ಮೈಸೂರು