ಅನುದಿನ ಕವನ-೬೮ (ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಅಹಂ ಅಲ್ಲ, ಆತ್ಮಾವಲೋಕನ)

ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಹಟ್ಟಿ ಚಿನ್ನದ ಗಣಿಯ ಕವಿ ಮಹೇಂದ್ರ ಕುರ್ಡಿ ಅವರ ‘ಅಹಂ ಅಲ್ಲ, ಆತ್ಮಾವಲೋಕನ’ ಕವಿತೆ ಪಾತ್ರವಾಗಿದೆ.👇

‘ಅಹಂ ಅಲ್ಲ , ಆತ್ಮಾವಲೋಕನ’

ಒಲವ ಸಾಹಿತ್ಯ ಅರಸಿ
ನಾ ಬಂದೆ
ಗೆಲುವು ಕಾಣುವ ಆಶಯದಿ
ಬರೆಯುತ ನಿಂದೆ

ನಾನೊಬ್ಬ ಪದ ಮೀನು ಹಿಡಿವ
ಮೀನುಗಾರ
ಭರವಸೆಯ ನುಡಿ ಹುಡುಕುವ
ಕನಸುಗಾರ.

ಆಲೋಚನೆಯ ಹೊಳೆಯಲ್ಲಿ
ಚಿಂತನೆಯ ಗಾಳ ಹಾಕಿ
ವಿಚಾರವೆಂಬ ಮೀನು ಹಿಡಿವ
ಕೌತುಕಗಾರ.

ಗಾಳಕ್ಕೆ ಪದ ಮೀನು ಸಿಕ್ಕಿ
ಹೊರ ಬರುವವರೆಗೂ
ಸಂಯಮದಿ ದಿನವಿಡಿ ಕಾಯುವ
ಚಿಂತನೆಯ ಛಲಗಾರ.

ದಿನಕ್ಕೊಂದೇ ಮೀನು (ನುಡಿ)
ಸಿಕ್ಕರಷ್ಟೇ ಸಾಕೆನಗೆ
ಪದವಿಯ ಆಸೆ ಪಡುವವನಲ್ಲ
ಆದರೂ ಮಹತ್ವಾಕಾಂಕ್ಷಿ .

ಒಂದೆರಡು ಪದ ಮೀನು ಸಿಕ್ಕರೂ
ಖುಷಿ ಪಡುವೆ
ತೃಪ್ತಿಯಿಂದ ಎತ್ತಿ ಬಚ್ಚಿಡುವೆ
ಮಸ್ತಕದ ಬುಟ್ಟಿಯೊಳಗೆ.

ಹದವಾಗಿ ಪದ ಬೆರೆಸಿ ನಂತರ
ನುಡಿ ಅಡುಗೆ ಮಾಡಿ
ಪ್ರೀತಿಯಲಿ ಉಣಬಡಿಸುವೆ ನಿತ್ಯ
ಅಂತರ್ಜಾಲದ ಆತ್ಮೀಯರಿಗೆ.

ಆತ್ಮೀಯರ ಪ್ರೋತ್ಸಾಹ ಅಭಿಮಾನಕೆ
ಶರಣೆನ್ನುವೆ
ತಪ್ಪುಗಳೇನೇ ಇದ್ದರು ತಿಳಿಸಿ
ಖುಷಿಯಲಿ ಒಪ್ಪಿ ತಿದ್ದಿ ನಡೆವೆ.

✍🏻 ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ, ರಾಯಚೂರು(ಜಿ)

*****