ಅನುದಿನ ಕವನ-೬೯ (ಕವಿ: ರಮೇಶ ಎ.ಎನ್, ಗುಬ್ಬಿ, ಹನಿಗವನಗಳ ಶೀರ್ಷಿಕೆ:ಬೆಳಕು & ಮೌಲ್ಯ)

ಎರಡು ಬೆಳಕಿನ ಹನಿಗವಿತೆಗಳು. ಬದುಕನ್ನು ಬೆಳಗುವ ನಿತ್ಯ ಸತ್ಯದ ಅಕ್ಷರ ಪ್ರಣತೆಗಳು. ಹನಿಗವಿತೆಗಳ ವೈಶಿಷ್ಟ್ಯವೇ ಚೆಂದ. ಹನಿ ಹನಿಯಲ್ಲೂ ಅಗಾಧ ಅರ್ಥಗಳ ವಿಸ್ತಾರ. ಮಾರ್ಮಿಕ ಸತ್ಯಗಳ ಸಾಕಾರ. ಹಲವು ತತ್ವಗಳ ಝೇಂಕಾರ. ಏನಂತೀರಾ.?”

-ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇

1 ಬೆಳಕು.!
ದೇವರಮನೆಯಲಿ
ಪರಮಾತ್ಮನೆದುರು
ಹಚ್ಚಿಟ್ಟು ಉರಿಸುವ
ತೈಲದಾ ದೀಪ
ಪ್ರಾರ್ಥನೆಗೆ ಪ್ರೇರಣ.!

ಎದೆಯಗೂಡಿನಲಿ
ಅಂತರಾತ್ಮನೆದುರು
ಹಚ್ಚಿಟ್ಟು ಉರಿಸುವ
ಅರಿವಿನಾ ದೀಪ
ಪರಿವರ್ತನೆಗೆ ಕಾರಣ.!
******************

2 ಮೌಲ್ಯ..!

ನಾಲಿಗೆಯಲ್ಲಾಡುವ ತತ್ವಕ್ಕೆ
ಸಿಗಬೇಕೆಂದರೆ ಮಹತ್ವ..
ಎದೆಯಲ್ಲಿರಲೇಬೇಕು ಸತ್ವ
ನಡೆಯೊಂದಿಗಿರಲೇಬೇಕು..
ನಿತ್ಯವೂ ಸತ್ಯದ ಸಹಭಾಗಿತ್ವ.!

-ಎ.ಎನ್.ರಮೇಶ್. ಗುಬ್ಬಿ.