ಅನುದಿನ ಕವನ-೭೦. (ಕವಿ: ಡಾ.‌ಸದಾಶಿವ ದೊಡ್ಡಮನಿ, ಇಳಕಲ್. ಕವನದ ಶೀರ್ಷಿಕೆ:ಅಪೂರ್ವ)

ಕವಿ ಡಾ. ಸದಾಶಿವ ದೊಡಮನಿ ಅವರ ಕಿರು ಪರಿಚಯ:

ಕಾವ್ಯ, ಸಂಶೋಧನೆ, ವಿಮರ್ಶೆ ಹೀಗೆ ಸಾಹಿತ್ಯ ಹಲವು ಪ್ರಕಾರಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ನಮ್ಮ ನಡುವಿನ ಸಾಹಿತಿ ಡಾ. ಸದಾಶಿವ ದೊಡಮನಿ ಅವರು. ತಮ್ಮ ಮೊದಲ ಕವಿತೆಗಳ ಗುಚ್ಚ ‘ನೆರಳಿಗೂ ಮೈಲಿಗೆ’ ಕಾವ್ಯ ಪ್ರಿಯರ ಗಮನ ಸೆಳೆದಿದೆ.
ಕನ್ನಡ ಕಾವ್ಯಲೋಕದಲ್ಲಿ ಭರವಸೆ ಹುಟ್ಟಿಸಿರುವ ಡಾ. ಸದಾಶಿವ ದೊಡ್ಡಮನಿ ಅವರು ಬದುಕಿನ ಬವಣೆಗಳನ್ನು ಕಷ್ಟದ ಶಬ್ಧಗಳಲ್ಲಿ ಕಾವ್ಯವನ್ನು ಕಟ್ಟುವ ಅವರ ಶೈಲಿ ಅನನ್ಯವಾದುದು.
ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಇವರ ಹನಿಗವಿತೆಗಳನ್ನು ಅತ್ಯಂತ ಆಸಕ್ತಿಯಿಂದ ಓದಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಉತ್ತಮ ಬೆಳವಣಿಗೆ.
ನಿರಂತರವಾಗಿ ಕಾವ್ಯ ಕೃಷಿಯಲ್ಲಿ ತೊಡಗಿರುವ ಡಾ. ಸದಾಶಿವ ಅವರ ‘ಇರುವುದು ಒಂದೇ ರೊಟ್ಟಿ’ ಎರಡನೆಯ ಕವನ ಸಂಕಲನ ಪ್ರಕಟಣೆಯ ಹಂತದಲ್ಲಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ.
ಇಂದಿನ “ಅನುದಿನ‌ ಕವನ” ಕ್ಕೆ ಡಾ. ದೊಡ್ಡಮನಿ ಅವರ ‘ಅಪೂರ್ವ’ ಕವಿತೆ ಪಾತ್ರವಾಗಿದೆ.👇

ಅಪೂರ್ವ…

ನೀನು ಬಂದಾಗಿನಿಂದಲೂ
ಏನೋ ಒಂದು ತರಹದ ಕಳೆ ಕೆನೆಗಟ್ಟಿದೆ
ಮಗಳೇ
ಮನ- ಮನೆಯೊಳಗೆ

ನಿನ್ನ ಅಳು, ನಗು ಗಾನದಂತಿದೆ!
ನಿನ್ನ ಗಾಜುಗಣ್ಣೋಟದ ಮುಂದೆ ದೀಪಗಳೂ
ಡಲ್ಲು ಹೊಡೆಯುತ್ತಿವೆ
ನಮ್ಮಲ್ಲಿ ಉತ್ಸಾಹ ಇಮ್ಮಡಿಗೊಳಿಸಿವೆ

ಅಕ್ಷರಾ-ಸಂಸ್ಕೃತಿಗೆ ಅಕ್ಕರೆಯ ಬೊಂಬೆ ಸಿಕ್ಕಂತಾಗಿದೆ!
ಆಟ, ಊಟವ ಮರೆತು ತಂಗಿಯ ಆಟ, ನೋಟ ನೋಡುವುದೇ ಹಬ್ಬವಾಗಿದೆ ಅವರ ಮನಕೆ

ಹೆಸರಿಡಲು ಫೇಸ್ ಬುಕ್ ದಲಿ
ಹೆಸರು ಸೂಚಿಸಲು ಕೋರಿದರೆ,
ಸ್ನೇಹಿತರು ತರತರದ ನಾಮವ ಸೂಚಿಸಿ,
ಶುಭವ ಕೋರಿಹರು ನಿನಗೆ

ಅತ್ತೆ, ಮಾವ, ಚಿಕ್ಕಿಯರೂ ಹೇಳಿಹರು
ಹೆಸರು ಒಂದರ ಮೇಲೊಂದರಂತೆ
ಸಂಭ್ರಮವೇ ಹಾಸಿ ಮಲಗಿದೆ ಮಗಳೇ
ಎದೆಗೂಡಲ್ಲಿ ಬೆಚ್ಚಗೆ

ನೀ ಬಂದ ಕ್ಷಣವೇ ನಮ್ಮೊಳಲೊಬ್ಬಳಾಗಿ
ಬೆರೆತು ಹೋದೆ
ಹೆಸರಿಟ್ಟು ಕರೆಯುವುದೊಂದೇ ಬಾಕಿ ಉಳಿದಿದೆ
ಹೀಗೆಯೇ ನಗುನಗುತ, ನಮ್ಮ ನಲಿಸುತ
ಇರು ಮಗಳೆ ನಮ್ಮೊಂದಿಗೆ
ಶುಭದ ನೆರಳಿರಲಿ ನಿನ್ನ ಬೆನ್ನು, ನೆತ್ತಿಗೆ

-ಡಾ. ಸದಾಶಿವ ದೊಡಮನಿ
ಕನ್ನಡ ಸಹಾಯಕ ಪ್ರಾಧ್ಯಾಪಕರು,
ಇಳಕಲ್                                                            *****

 

One thought on “ಅನುದಿನ ಕವನ-೭೦. (ಕವಿ: ಡಾ.‌ಸದಾಶಿವ ದೊಡ್ಡಮನಿ, ಇಳಕಲ್. ಕವನದ ಶೀರ್ಷಿಕೆ:ಅಪೂರ್ವ)

Comments are closed.