ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಗ್ರಾಮದವರು. ಸಿರಿಗೆರೆಯಲ್ಲಿ ಹೈಸ್ಕೂಲ್ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ ಹಾಗೂ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಹೊಳಲ್ಕೆರೆಯಲ್ಲಿ ವಾಸವಿದ್ದು, ಹೊಳಲ್ಕೆರೆಯ ಅಮೃತಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ.
ಕೃತಿಗಳು: ನನ್ನ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್ (ಮಕ್ಕಳ ಹಾಡುಗಳು), ವಚನಾಂಜಲಿ, ಫೋಟೋಕ್ಕೊಂದು ಫ್ರೇಮು (ಕವನ ಸಂಕಲನ)
ಪ್ರಶಸ್ತಿ ಪುರಸ್ಕಾರಗಳು: ತಾಲೂಕು ಅತ್ಯುತ್ತಮ ಶಿಕ್ಷಕ ಪುರಸ್ಕಾರ (2009), ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕಾರ (2017), ರೋಟರಿ ಅತ್ಯುತ್ತಮ ಶಿಕ್ಷಕ ನೇಷನ್ ಬಿಲ್ಡರ್ ಅವಾರ್ಡ್(2013 ಮತ್ತು 2019), ‘ಫೋಟೊಕ್ಕೊಂದು ಪ್ರೇಮು’ ಪುಸ್ತಕಕ್ಕೆ ರೋಣ ಗಜೇಂದ್ರಗಡ ಕನ್ನಡ ಸಾಹಿತ್ಯ ಪರಿಷತ್ತಿನಿಂದ “ಸಾಹಿತ್ಯ ಚಿಗುರು” ಪ್ರಶಸ್ತಿ 2019 ಲಭಿಸಿದೆ.
ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ನಿಂದ ಅಸ್ಸಾಂ ರಾಜ್ಯದ ಗೌಹಾತಿಯಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಭಾಗಿ, ಶೈಕ್ಷಣಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಕಾರ್ಯಗಳಿಗಾಗಿ ಪುರಸ್ಕಾರ, 2021 ರಲ್ಲಿ ಬೆಂಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತನಿಂದ ಕನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, ಕರುನಾಡ ಹಣತೆ ಸಾಹಿತ್ಯ ಬಳಗದಿಂದ (2021) ಕರುನಾಡ ಸಾಧಕ ರತ್ನ ರಾಜ್ಯ ಪ್ರಶಸ್ತಿ, ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ರಾಜ್ಯದ ಎಲ್ಲ ಬಾನುಲಿಗಳಲ್ಲಿ ಸ್ವರಚಿತ ಕಥೆ “ಡಾಲಿ” ಕಥೆ ವಾಚನ ಪ್ರಸಾರವಾಗಿದೆ. ಚಿತ್ರದುರ್ಗ ಆಕಾಶವಾಣಿ ಯಿಂದ ಇವರ ಕಥೆ-ಕವನಗಳು ಪ್ರಸಾರವಾಗಿವೆ. 2019 ರಲ್ಲಿ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇವರು ರಚಿಸಿದ ರೂಪಕ “ಗುರುಭ್ಯೋ ನಮಃ” ಧ್ವನಿಮುದ್ರಿತಗೊಂಡು ರಾಜ್ಯಾದ್ಯಂತ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರವಾಗಿದೆ.
*****
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಉಮೇಶ್ ಅವರ
‘ಎದ್ದು ಬಂದ ದೊಡ್ಡವರು’ ಕವಿತೆ ಪಾತ್ರವಾಗಿದೆ.👇
ಎದ್ದು ಬಂದ ದೊಡ್ಡವರು!
*****
ಆಕಳಿಸಿ ತೂಕಡಿಸಿ ಎಚ್ಚರವೇ ತಪ್ಪಿ;
ಇನ್ನೇನು ಆಯ ಹೊಡೆದು ಬಿದ್ದೇ ಬಿಟ್ಟೆವು; ನೆಲದ ಜೋಲಿ ಕಗ್ಗತ್ತಲ ಕಂದರಕೆ;
ಎಂಬಷ್ಟರಲ್ಲಿ ತಲೆಬೀಜದಲಿ ಸಾವಿರ ಮೊಳಕೆಗಳು;
ನನ್ನ ನರನರಗಳಲಿ ಭೀಷಣ ಭಾಷಣಗಳ ಚಚ್ಚುತಲಿ;
ದೊಡ್ಡವರು ಎದ್ದು ಬಂದರು!
ಹಸಿವಾಗಿ ಹೊಟ್ಟೆತೊಳಸಿ ವಾಂತಿಯಾಗಿ;
ಭ್ರಾಂತಿ ಕಾಡಿ ಮೂರ್ಛೆ ಹಿಡಿದು;
ಶಾಂತ ಮಣ್ಣಿಗೆ ಕಾಂತ ರಕ್ತವಾಗುವಷ್ಟರಲ್ಲಿ;
ಮೈಯೆಲ್ಲ ಕೋಟಿ ಸೂರ್ಯನರ್ತನ!
ನನ್ನ ಬೆವರ ಬೆಳಕಲಿ ಕಂದೀಲಿ ಹಿಡಿದು;
ದೊಡ್ಡವರು ಎದ್ದು ಬಂದರು!
ಓದು ಬರಹ ದುಡಿಮೆ ತತ್ವ ನೀತಿ ಕಾಯ್ದೆಗಳಿಗೂ;
ಬೆಂಕಿ ಸಿಡಿಲು ಬಿರು ಉಲ್ಕೆ ಹೊಡೆದು;
ಅರಿವ ಜಂಗಮ ಕಾಲು ಕೈ ಕಣ್ಗಳು ಮುರುಟಿ; ಲಕ್ವಬಿದ್ದು ಪ್ರಾಣವಾಯು ಕಾಲವಾಗುವಷ್ಟರಲ್ಲಿ;
ಹುಸಿ ದೇಹದ ಮಾಂಸಕೆಲ್ಲ ಬೇಡಿಕೆ!
ನನ್ನ ಕರೆನ್ಸಿಗಳಲಿ ನಗುನಗುತ;
ದೊಡ್ಡವರು ಎದ್ದು ಬಂದರು!
ತಾರಾ ಮಹಲುಗಳಲಿ ಪಂಡಿತ ಶ್ರೇಷ್ಠರು; ಅಕಾಡೆಮಿ ಪದಕವೀರರು ಅಕ್ಷರ ಗನ್ನುಗಳು; ಜಾತಿ ನಾಮಾಂಕಿತ ಬೋಳೆಗಳು;
ಬರಹ ಲಾಬಿಗಳು ಪೇಪರ್ ಬ್ರೋಕರ್ ಗಳು;
ನೆಲ ಜಲ ವಾಯು ಬೆಂಕಿ ಮೋಡಗಳ;
ಕರಗಿಸಿ ಕುಡಿದು ಅಡಗುವಷ್ಟರಲ್ಲಿ;
ಕಡತಂದ ಒಡಲ ಅವತಾರಗಳಿಗೆಲ್ಲ ಮಾರುಕಟ್ಟೆ!
ನನ್ನ ಹೆಜ್ಜೆಗಳ ನಿಟ್ಟುಸಿರುಗಳಲಿ;
ದೊಡ್ಡವರು ಎದ್ದು ಬಂದರು!
ಕಣ್ಣೀರಿಲ್ಲದೆ ಬಿಕ್ಕುತಿಹರು;
ನನ್ನ ಕರುಳ ಒತ್ತಿ ಹತ್ತಿ ದಾರ ಎಳೆದು;
ಮೈಗಂಧ ಹಚ್ಚಿ ಹೂಗಳ ನಗಿಸಿ ಬಣ್ಣ ಇರಿಸಿ; ಲೋಕ ರಂಗುಗೊಳಿಸಿದವರು;
ಮೇಟಿ ಬರದ ಲಾಟಿ ಹಿಡಿದ ಮಾತಿನೀಟಿಯಲಿ; ನೆಲ ಲೂಟಿ ಹೊಡೆದ ಖಜಾನೆಯೊಳಗೆ; ಅಮಲೇರಿ ಮೈಮುರಿಯುತ;
ಎದ್ದು ಬಂದರು ದೊಡ್ಡವರು!!
-ಟಿಪಿ.ಉಮೇಶ್
ಸಹಶಿಕ್ಷಕರು
ಸರ್ಕಾರಿ ಪ್ರಾಥಮಿಕ ಶಾಲೆ
ಅಮೃತಾಪುರ
ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ.