ಬಳ್ಳಾರಿ: ಜ್ಞಾನ ವಿಜ್ಞಾನ ತಂತ್ರಜ್ಞಾನ ವಿಕಸನ ವಿದ್ಯಾರ್ಥಿ-ವಿದ್ಯಾರ್ಥಿನಿ ವೃಂದ, ಪ್ರಬುದ್ಧ ವ್ಯಕ್ತಿತ್ವದ ಬೋಧಕ ಬೋಧಕೇತರ ಗಣ್ಯರನ್ನು ಕರ್ಣಮಧುರ ಗೀತಗಾಯನ, ಚಿತ್ತಾಕರ್ಷಕ ಸಂಭಾಷಣೆ-ನಿರೂಪಣೆ, ನೇತ್ರಾನಂದಕರ ತೊಗಲುಗೊಂಬೆ ದೃಶ್ಶಾವಳಿಯ ಜಾನಪದ ಕಲಾ ಮಾಧ್ಯಮದ “ಬಾಪೂಜಿ”ಜೀವನ ಕಥಾಮೃತ ಪ್ರಯೋಗ ಮಂತ್ರಮುಗ್ಧಗೊಳಿಸಿತು.
ನಗರದ ಹೊರವಲಯ ಹೊಸಪೇಟೆ-ಬೆಂಗಳೂರು ಬೈಪಾಸ್ ರಸ್ತೆ, ಸುವಿಶಾಲ ಪ್ರಶಾಂತ ಪ್ರಕೃತಿ ಮಡಿಲಲ್ಲಿ ಶೋಭಿಸುವ ಮರ್ಚೇಡ್ ಸಮೂಹ “ಜ್ಞಾನಾಮೃತ ಪಿ.ಯು.ಕಾಲೇಜು” ಮಂಗಳಾಂಗಣದಲ್ಲಿ ಈಚೆಗೆ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ (ರಿ) “ಬಾಪೂಜಿ” ತೊಗಲು ಗೊಂಬೆಯಾಟವನ್ನು ಪ್ರಯೋಗಿಸಿತು.
ಬ್ರಿಟಿಷರ ಕಪಿಮುಷ್ಠಿಯಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ, ಮಹಾತ್ಮ ಗಾಂಧೀಜಿಯವರ ಭವ್ಯ-ದಿವ್ಯ ಜೀವನವನ್ನು ತೊಗಲು ಗೊಂಬೆಯಾಟ ಜಾನಪದ ಕಲಾಮಾಧ್ಯಮದಲ್ಲಿ ಮನೋಜ್ಞವಾಗಿ ಹೃದಯಂಗಮವಾಗಿ ನಿರೂಪಿಸಿದ ವಿಧಾನವಿಶೇಷತೆಗೆ ಪ್ರೇಕ್ಷಕರು ವಿಸ್ಮಯಾನಂದಭರಿತರಾದರು.
ತೊಗಲುಗೊಂಬೆ ಪ್ರದರ್ಶನಾರಂಭದ ಮುಂಚೆನಡೆದ ಸರಳ ವೇದಿಕೆ ಸಮಾರಂಭವನ್ನು ಇತ್ತೀಚೆಗೆಯಷ್ಟೇ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪಡೆದ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ತಂದೆಯವರ ಆತ್ಮೀಯ ಒಡನಾಡಿಗಳಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ತಮ್ಮ ಕುಟುಂಬದ ಪ್ರೇರಕ ಶಕ್ತಿಯಾಗಿದ್ದಾರೆಂದು ತಿಳಿಸಿದರು.
ರಂಗಕರ್ಮಿ ವೀರಣ್ಣ ಅವರ ರಂಗಭೂಮಿ ಮತ್ತು ತೊಗಲುಗೊಂಬೆಯಾಟ ಜಾನಪದ ಕಲಾಭಿಜ್ಞತೆಯನ್ನು ಪ್ರಶಂಸಿಸಿದರು.
ಮುಖ್ಯಅತಿಥಿಯಾಗಿದ್ದ ಹಿರಿಯ ಸಾಹಿತಿ ಗಂಗಾಧರ ಪತ್ತಾರ ಅವರು, ವೀರಣ್ಣ ಅವರು, ತೊಗಲುಗೊಂಬೆಯಾಟದಲ್ಲಿ ಪ್ರಯೋಗಿಸುತ್ತಿದ್ದ ಪಾರಂಪರಿಕ ರಾಮಾಯಣ- ಮಹಾಭಾರತದ ಕಥಾನಕಗಳ ಬದಲು ಸ್ವಾತಂತ್ರ್ಯ ಸಂಗ್ರಾಮ, ಪ್ರವಾದಿ ಬಸವೇಶ್ವರ, ಬುದ್ಧ, ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕಾವ್ಯದ ಲಂಕಾದಹನ ಪ್ರಸಂಗ, ಕನಕದಾಸರ ಜೀವನ ವೃತ್ತಾಂತಗಳನ್ನು ತೊಗಲುಗೊಂಬೆಯಾಟಕ್ಕೆ ಅಳವಡಿಸಿ ಹೊಸ ಆಯಾಮ ತಂದ ಪ್ರವರ್ತಕರು ಎಂದು ಶ್ಲಾಘಿಸಿದರು.
ಮರ್ಚೇಡ್ ವಿದ್ಯಾಸಂಸ್ಥೆಗಳ ಡೀನ್ ಅನಿಲ ಕಣಗಣ್ಣಿಯವರು “ಜಾನಪದಶ್ರೀ”-“ನಾಡೋಜ” ಸೇರಿದಂತೆ ಹಲವು ಪದವಿ-ಪ್ರಶಸ್ತಿಗಳನ್ನು ಪಡೆದ, ದೇಶ-ವಿದೇಶಗಳಲ್ಲಿ ಭಾರತದ ಪ್ರಾಚೀನ ಕಲೆ ಪ್ರದರ್ಶಿಸಿದ ಅನನ್ಯ ಸಾಧಕರಾದ ಜನಪದ ಶ್ರೀ ಬೆಳಗಲ್ಲು ವೀರಣ್ಣನವರ ಬದುಕು ವಿದ್ಯಾರ್ಥಿ ವೃಂದಕ್ಕೆ ಆದರ್ಶವಾಗಬೇಕೆಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗರಾಜ ಅವರು, ಬೆಳಗಲ್ಲು ವೀರಣ್ಣನವರ ತೊಗಲುಗೊಂಬೆಯಾಟದ ಬಗ್ಗೆ ಕೇಳಿದ್ದೆ. ಇಂದು ಪ್ರದರ್ಶಿತ ಬಾಪೂಜಿ ಅಮರ ಜೀವನ ಕಥಾ ವೃತ್ತಾಂತವನ್ನು ತೊಗಲುಗೊಂಬೆ ಮಾಧ್ಯಮದಲ್ಲಿ ಕಣ್ಣಾರೆ ವೀಕ್ಷಿಸಿ ಮೂಕವಿಸ್ಮಿತನಾದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಯಶವಂತ ಶೆಟ್ಟಿ ಅವರು ಮಾತನಾಡಿ, ಬೆಳಗಲ್ಲು ವೀರಣ್ಣ ಅವರ ಕಲಾಜೀವನ, ಸಿದ್ಧಿ-ಸಾಧನೆ ವಿದ್ಯಾರ್ಥಿಗಳಿಗೆ ದಾರಿದೀಪವಾಗ ಬೇಕು, ಇಂತಹ ಮಹನೀಯರಿಂದ ಭಾರತದ ಸನಾತನ ಸಂಸ್ಕೃತಿಯ ಕಲಾ ಜ್ಯೋತಿ ನಿರಂತರ ನಂದಾದೀಪವಾಗಿ ಬೆಳಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ಕು. ರಕ್ಷಿತಾ.ಆರ್ ಪ್ರಾರ್ಥಿಸಿದರು. ಟ್ರಸ್ಟಿನ ಸ್ಥಾಯಿ ಸದಸ್ಯರಾದ ಗಂಗಾಧರ ದುರ್ಗಂ ಮತ್ತು ಸುರೇಂದ್ರಸ್ವಾಮಿ ನಿರೂಪಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿಗೆ ಭಾಜರಾದ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡರನ್ನು ಜ್ಞಾನಾಮೃತ ಪಿ.ಯು.ಕಾಲೇಜಿನ ಸಿಬ್ಬಂದಿ-ವಿದ್ಯಾರ್ಥಿ ವೃಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು.
*****