ಕನ್ನಡ ಸೇವಾ ರತ್ನ’ ಹೊಸಹಳ್ಳಿ ದಾಳೇಗೌಡ
*****
ದಾಳ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಹೊಸಹಳ್ಳಿ ದಾಳೇಗೌಡರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಹಳ್ಳಿಯವರು. ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಬಿ.ಆರ್ ಪ್ರಾಜೆಕ್ಟ್ ನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ..
ಪತ್ರ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಶ್ರೀಯುತರನ್ನು ಕನ್ನಡದ ಹಿರಿಯ ಪತ್ರಿಕೆ ಸಂಯುಕ್ತ ಕರ್ನಾಟಕ ‘ಪತ್ರ ಸಂಸ್ಕೃತಿ ದಾಳ’ ಎಂದೇ ನಾಡಿಗೆ ಪರಿಚಯಿಸಿರುವುದು ವಿಶೇಷ.
ಪತ್ರ ಸಂಸ್ಕೃತಿ ಮರೆಯಾಗುತ್ತಿರುವ ಸಂದರ್ಭದಲ್ಲಿಯೂ ಪತ್ರ ಬರವಣಿಗೆ ಉಳಿವಿಗಾಗಿ ಪತ್ರ ಮೈತ್ರಿ ಹವ್ಯಾಸಿಗಳನ್ನು ಸಂಘಟಿಸಿ ಪ್ರತಿ ವರ್ಷವೂ ಸಮಾವೇಶ ಆಯೋಜಿಸುತ್ತಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮತ, ಭದ್ರಾ ಜಲಯೋಜನೆಯ ಕಾರ್ಯಪಾಲಕ ಅಭಿಯಂತರಾಗಿ ನಿವೃತ್ತರಾದರೂ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ವಿಮುಖರಾಗಿಲ್ಲ.
ತಮ್ಮ ವಿಶ್ರಾಂತ ಜೀವನವನ್ನು ನಟನೆ, ಓದು, ಬರಹ, ಕ್ರೀಡೆ, ಪ್ರವಾಸ, ಉಪನ್ಯಾಸಗಳ ಮೂಲಕ ಅರ್ಥಪೂರ್ಣವಾಗಿ ಕಳೆಯುತ್ತಿರುವ ದಾಳೇಗೌಡರು ಸಾಹಿತ್ಯ ಲೋಕವನ್ನು ಪ್ರವೇಶಿಸುವ ಕಿರಿಯ ಬರಹಗಾರರಿಗೆ ಉತ್ತಮ ಮಾರ್ಗದರ್ಶಕರಾಗಿ ಕವಿ, ಕವಯತ್ರಿ,ಲೇಖಕರಾಗಲು ಪ್ರೋತ್ಸಾಹಿಸುತ್ತಾ ಗುರು ಸ್ಥಾನವನ್ನು ಗಳಿಸಿರುವುದು ಇವರ ಹೆಗ್ಗಳಿಕೆ.
ಯಾವುದೇ ಪ್ರಚಾರ, ಪ್ರಶಸ್ತಿಗಳನ್ನು ಬಯಸದೇ ಇದ್ದರು
ಇವರ ಸಾಹಿತ್ಯ, ಸಾಮಾಜಿಕ ಕಾರ್ಯಗಳಿಗೆ ಕಸಾಪ ಸೇರಿದಂತೆ ಹತ್ತು ಹಲವು ಸಂಘಟನೆಗಳು ವಿವಿಧ ಪ್ರಶಸ್ತಿ ನೀಡಿ ಗೌರವಿಸಿವೆ.
“ಬರೆದುಕೊಳ್ಳೋಣ, ಬರೆಯೋಣ, ಬೆಳೆಸೋಣ,ಬದುಕೋಣ” ಎಂದು ಅತ್ಯಂತ ಪ್ರೀತಿಯಿಂದ ಕರೆ ನೀಡುವ ಹಿರಿಯ ಸಾಹಿತಿ ದಾಳೇಗೌಡರ ಅವರ ‘ಕಹಳೆ’ ಕವಿತೆ ಇಂದಿನ ‘ಅನುದಿನ ಕವನ’ಕ್ಕೆ ಪಾತ್ರವಾಗಿದೆ.👇
ಕಹಳೆ
****
ಬನ್ನಿ ಬನ್ನಿ ಬನ್ನೀ ಬನ್ನೀ
ಬನ್ನಿರಣ್ಣ ತಮ್ಮಗಳೇ
ಬನ್ನಿರಕ್ಕ ತಂಗಿಯರೇ !! ಬನ್ನಿ!!
ಹಾರಿಸೋಣ ವಂದಿಸೋಣ
ಗೌರವ ಭಾವ ತೋರಿಸೋಣ
ನಮ್ಮ ದೇಶದಾ ಬಾವುಟಕೆ !!ಬನ್ನಿ!!
ದುಷ್ಟ ಶಕ್ತಿ ದಮನ ಮಾಡಿ
ಕಷ್ಟ ಪಟ್ಟು ಕೆಲಸ ಮಾಡಿ
ನಾಡ ಏಳ್ಗೆಗೆ ನಾಂದಿಹಾಡೋಣ !!ಬನ್ನಿ!!
ಯುವ ಶಕ್ತಿಗೆ ಗಮನ ನೀಡಿ
ದೇಶ ಭಕ್ತಿಗೆ ಆಧ್ಯತೆ ನೀಡಿ
ಶ್ರಮದ ಜನಕೆ ಚೈತನ್ಯತುಂಬೋಣ !!ಬನ್ನಿ!!
ಜಾತಿ ಭೇದವ ಮರೆತು ಬನ್ನಿ
ದುಡಿಯುವವರಲಿ ಒಡಕಿಲ್ಲವೆನ್ನಿ
ಧ್ವನಿ ಎತ್ತಿ ಪ್ರತಿಭಟಿಸೋಣ !!ಬನ್ನಿ!!
ಕ್ರಾಂತಿ ಗೀತೆ ಬೇಕು ಎನ್ನಿ
ರಕ್ತ ಕ್ರಾಂತಿ ಬೇಡವೆನ್ನಿ
ಶಾಂತಿ ಮಂತ್ರ ಜಪಿಸೋಣ !!ಬನ್ನಿ!!
ನೇಮನಿಷ್ಠೆ ನಮ್ಮುಸಿರೆನ್ನಿ
ತ್ಯಾಗ ಪ್ರೀತಿ ನಮ್ಮಲ್ಲಿದೆಯೆನ್ನಿ
ಕ್ರಾಂತಿ ಕಹಲೆ ಊದೋಣ!!ಬನ್ನಿ!!
-ಹೊಸಹಳ್ಳಿ ದಾಳೇಗೌಡ,
ಬಿ.ಆರ್.ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ
*****