ಅನುದಿನ ಕವನ-೭೪ (ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಮಕ್ಕಳಿಗೊಂದು ಮನವಿ)

“ಇದು ವಯಸಿಗೆ ಬಂದ ಮಕ್ಕಳು ಓದಲೇಬೇಕಾದ ಕವಿತೆ.. ಅವರಿಗೆ ಹೇಳಲೇಬೇಕಾದ ಕವಿತೆ..”

ಮೀಸೆ ಮೂಡುತ್ತಿದ್ದಂತೆ ದೊಡ್ಡವರಾದೆವೆಂದು ತಿಳಿದು arrogant ಆಗುವ ಮಕ್ಕಳು, ಹೆತ್ತವರ ಸಂವೇದನೆಗಳನ್ನು ಅಲಕ್ಷಿಸುತ್ತಾರೆ. ಬದುಕಿನ ಮೌಲ್ಯಗಳನ್ನು ಮರೆಯುತ್ತಾರೆ. ಫ್ರೌಡರಾಗುವುದೆಂದರೆ ಸ್ವೇಚ್ಛೆ, ದರ್ಪ, ದಾಷ್ಟಿಕತೆಗಳನ್ನು ಮೈಗೂಡಿಸಿಕೊಳ್ಳುವುದಲ್ಲ. ಜೀವ-ಜೀವನ ಮೌಲ್ಯಗಳನ್ನು ಅರಿಯುವುದು, ಹೆತ್ತು, ಹೊತ್ತು ಪೊರೆದವರ ಭಾವ, ಬವಣೆಗಳನ್ನು ಅರಿತು ಅವರಿಗೆ ಹತ್ತಿರವಾಗುವುದು. ಅವರ ಎದೆಯ ಭಾರವನ್ನು ಹಗುರಾಗಿಸುವುದು. ಏನಂತೀರಾ.?” – ಎಂದು ಪ್ರೀತಿಯಿಂದ ಕೇಳುತ್ತಿದ್ದಾರೆ…                          ಕವಿ ಎನ್.ರಮೇಶ್. ಗುಬ್ಬಿ ಅವರು…👇

ಮಕ್ಕಳಿಗೊಂದು ಮನವಿ..!

*****

ಕೊಟ್ಟ ಊಟ ರುಚಿಯಿಲ್ಲವೆಂದು
ಕೋಪದಿ ಕಿರಿಚಾಡುವ ಮುನ್ನ..
ತಿನ್ನದೆ ತಟ್ಟೆಯಲ್ಲೇ ಕೈತೊಳೆದು
ದರ್ಪದಿ ಮೇಲೇಳುವ ಮುನ್ನ..

ಅಡುಗೆ ಬಡಿಸಿದ ಅಮ್ಮನ ಕೈಗಳ
ಮೇಲಿನ ಸುಟ್ಟ ಕಲೆಗಳ ನೋಡು
ಸಿಡಿದ ಎಣ್ಣೆಸಾಸುವೆ ಕುದಿವ ಅನ್ನ
ಮೂಡಿಸಿದ ಗುರುತುಗಳ ನೋಡು..

ಒಲೆಮುಂದೆ ಬೆಂದ ಮೊಗ ನೋಡು
ಪ್ರತಿತುತ್ತಿನಲಿ ಪರಮಾನ್ನ ಕಂಡೀತು
ತಟ್ಟೆಯಲಿ ಮೃಷ್ಟಾನ್ನದ ಸವಿ ಸಿಕ್ಕೀತು
ಅಗುಳು ಅಗುಳೂ ಅಮೃತವಾದೀತು.!

ನಡುರಾತ್ರಿಯಾದರೂ ಮೋಜಿನಲಿ
ಬೀದಿ ಬೀದಿ ಸುತ್ತುವಾ ಮುನ್ನ..
ಗೆಳೆಯರೊಂದಿಗೆ ಕಾಡುಹರಟೆಯಲಿ
ಕುಳಿತು ಕಾಲ ಕಳೆಯುವಾ ಮುನ್ನ..

ಮನೆಯ ಮುಂಬಾಗಿಲಲಿ ಕಾದುನಿಂತ
ಅಮ್ಮನ ಕನವರಿಕೆಗಳ ನೆನೆ ಮಾಡು
ನಿದ್ದೆಗೆಟ್ಟು ಬಳಲಿದ ಆ ಭಯಭೀತ
ಒಡಲ ಆತಂಕಗಳ ಊಹೆ ಮಾಡು..

ಆ ಕಂಗಳಲೊಮ್ಮೆ ಇಣುಕಿ ನೋಡು..
ಸರಿವ ಸಮಯದ ಪರಿವೆಯಾದೀತು
ಕವಿದ ಕಾರಿರುಳಕತ್ತಲ ಅರಿವಾದೀತು
ಅಮ್ಮನ ತಳಮಳ ಅರ್ಥವಾದೀತು.!

ಎ.ಎನ್.ರಮೇಶ್. ಗುಬ್ಬಿ.
*****