ನಮ್ಮ ನಿಮ್ಮೆಲ್ಲರ ‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 75 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ಎಪ್ಪತ್ತೈದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ನಮ್ಮದು.
ಇಂದಿನ 75ನೇ “ಅನುದಿನ ಕವನ”ದ ಗೌರವಕ್ಕೆ ಕವಿ ಶ್ರೀ ಮನಂ ಅವರ ‘ನನ್ನನ್ನು ಕಾಣಲರಿಯಿರಿ’ ಕವಿತೆ ಪಾತ್ರವಾಗಿದೆ. ವಿಶೇಷವೆಂದರೆ ಇತ್ತೀಚೆಗಷ್ಟೇ ಈ ಕವಿತೆ ರಾಗ ಸಂಯೋಜನೆಗೊಂಡು ಸಾಹಿತ್ಯ-ಸಂಗೀತ ಪ್ರಿಯರ ಮನಸೂರೆಗೊಂಡಿದೆ.
ಯುವ ಪ್ರತಿಭೆ ಹಗರಿಬೊಮ್ಮನಹಳ್ಳಿಯ ಪ್ರದೀಪ್ ಅಕ್ಕಸಾಲಿ ಅವರು ‘ನನ್ನನ್ನು ಕಾಣಲರಿಯಿರಿ’ ಕವಿತೆಗೆ
ರಾಗ ಸಂಯೋಜಿಸಿ ಹರಪನಹಳ್ಳಿಯ ಯುವ ಗಾಯಕ ಬಸವರಾಜ್ ಭಂಡಾರಿ ಅವರಿಂದ ಹಾಡಿಸಿದ್ದಾರೆ.👇
*****
ನನ್ನನ್ನು ಕಾಣಲರಿಯಿರಿ
ನನ್ನನ್ನು ನಾ ಧರಿಸುವ
ಧಿರಿಸಿನಲ್ಲಿ ಹುಡುಕಬೇಡಿ
ನನ್ನನ್ನು ನಾ ವಾಸಿಸುವ
ಮನೆಗಳಲ್ಲಿ ತಡಕಬೇಡಿ
ನನ್ನನ್ನು ನಾ ತೊಟ್ಟ
ಟೋಪಿ ಅಡಿಯಲಿ ಹಿಡಿಯಬೇಡಿ
ನನ್ನನ್ನು ನಾ ಮೆಟ್ಟಿದ
ಬೂಟಿನಲ್ಲಿ ಕೊಡವಬೇಡಿ
ನನ್ನನ್ನು ನಾ ಬರೆದ
ಬರವಣಿಗೆಗಳಲ್ಲಿ ಹುಡುಕಿರಿ
ನನ್ನನ್ನು ನಾ ಮಾಡಿದ
ಭಾಷಣಗಳಲ್ಲಿ ತಡಕಿರಿ
ನನ್ನನ್ನು ನಾ ಬದುಕುವ
ನಡೆಗಳಲ್ಲಿ ಹಿಡಿಯಿರಿ
ನನ್ನನ್ನು ನಾ ತಳೆಯುವ
ನಿಲುವುಗಳಲ್ಲಿ ಅರಿಯಿರಿ
-ಮನಂ
(ಎಂ.ನಂಜುಂಡಸ್ವಾಮಿ,ಐಪಿಎಸ್)
ಬಳ್ಳಾರಿ