ಬಹುಮುಖ ಪ್ರತಿಭೆಯ ಹಿಪ್ಪರಗಿ ಸಿದ್ಧರಾಮ
ಎಂ.ಎಸ್ಸಿ ಮತ್ತು ಎಂ.ಎ ಡಬಲ್ ಡಿಗ್ರಿ ಪಡೆದು ಧಾರವಾಡ ವಿ.ವಿ ಯಲ್ಲಿ ಸೇವೆಯಲ್ಲಿರುವ ಸಿದ್ಧರಾಮ ಅವರದು ಬಹುಮುಖ ಪ್ರತಿಭೆ.
ಕಳೆದ 25 ವರ್ಷಗಳಿಂದ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಸಂಘಟನೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ರಂಗಕರ್ಮಿ: ತುಘಲಕ್, ಚೂರಿಕಟ್ಟೆ, ಖರೇ ಖರೇ ಸಂಗ್ಯಾ ಬಾಳ್ಯಾ, ಮಹಾಮಾಯಿ, ಮಿಸೆಸ್ ಅಂಬೇಡ್ಕರ್, ರಮಾಬಾಯಿ ಅಂಬೇಡ್ಕರ ಮುಂತಾದ 50 ಕ್ಕಿಂತ ಹೆಚ್ಚು ನಾಟಕಗಳಲ್ಲಿ ಅಭಿನಯ, ಚಂದ್ರಮಾನ್ಯ, ಅರ್ಥ, ಗೆದ್ದ ಹೃದಯಗಳು ಮೂರು ನಾಟಕ ಕೃತಿ ರಚನೆ, ನರೇಂದ್ರ, ಪೂನಾ ಒಪ್ಪಂದ ಮುಂತಾದ 5 ನಾಟಕಗಳ ನಿರ್ದೇಶನ, ಮೂಡಲಮನೆ, ಇದ್ದರೆ ಇರಬೇಕು ನಿನ್ನಾಂಗ, ಕಿನ್ನರಿ ಮುಂತಾದ ಟಿವಿ ಧಾರಾವಾಹಿಗಳಲ್ಲಿ ಅಭಿನಯ, ಬಾನುಲಿ ಧಾರಾವಾಹಿಗಳಿಗೆ ಸಂಭಾಷಣೆ, ನಾಟಕಗಳ ವಾಚನ, ಕಾರ್ಯಕ್ರಮ ಸಂಘಟನೆ, ಆಯೋಜನೆಗಳಂತಹ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಕೊಂಡವರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ , ರಾಜ್ಯ ದಲಿತ ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಲ್ಲದೇ, ಯುವಕರ ಮತ್ತು ಮಕ್ಕಳ ಶಿಬಿರ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಯುವ ಜನೋತ್ಸವಗಳಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದಲ್ಲದೇ ಹೆಸರಿಲ್ಲದವರು ಎಂಬ ಬ್ಲಾಗ್ ಕವನ ಸಂಕಲನವನ್ನೂ ಪ್ರಕಟಿಸಿದ್ದಾರೆ.
ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಇವರ ಅನೇಕ ಬರಹಗಳು ಪ್ರಕಟಗೊಂಡಿವೆ. ಹಲವು ಸಂಘ ಸಂಸ್ಥೆಗಳಿಂದ ಜ್ಯೋತಿಬಾ ಫುಲೆ ರಾಷ್ಟ್ರೀಯ ಫೆಲೊಶಿಪ್, ಕನಕ ಗೌರವ, ಕಲಾ ಗೌರವ, ಅಂಬೇಡ್ಕರ್ ಫೆಲೊಶಿಫ್ ಗಳಂತಹ ಅನೇಕ ಪುರಸ್ಕಾರಗಳು ಸಿದ್ಧರಾಮ ಅವರನ್ನು ಅರಸಿ ಬಂದಿರುವುದು ಉಲ್ಲೇಖಾರ್ಹ.
ಬೀದಿ ನಾಟಕಗಳಲ್ಲಿ ಅಭಿನಯಿಸುವದು ಇವರ ಇಷ್ಟದ ಹವ್ಯಾಸಗಳಲ್ಲೊಂದು.
ನಯ, ವಿನಯ, ವಿಧೇಯತೆಗಳ ಸಂಗಮವಾಗಿರುವ ಸಿದ್ಧರಾಮ ಅವರು ಗಣಕರಂಗ ಸಂಸ್ಥೆಯನ್ನು ಸ್ಥಾಪಿಸಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮನ ಸೂರೆಗೊಂಡವರು.
ಉದಯೋನ್ಮುಖ ಬರಹಗಾರರನ್ನು ಸದಾ ಪ್ರೋತ್ಸಾಹಿಸುವ ಇವರ ‘ಕವಿತೆಗಳು’ ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಪಾತ್ರವಾಗಿದೆ.👇
*****
*ಕವಿತೆಗಳು*
ಹುಟ್ಟುವವು ಕವಿತೆಗಳು
ಭಾರತದ ಜನಸಂಖ್ಯೆಯಂತೆ !
ಮೆಚ್ಚುವರು ಕೆಲವರು
ನೋಡದೆ, ಆಸ್ವಾದಿಸದೆ !
ಆಸ್ವಾಧನೆಯ ಸೋಂಕಿಲ್ಲದೇ
ಸ್ವಾಧಾನುಭವದ ಸುಧೋಭನವಿಲ್ಲದೆ !
ವೇಗದಿಂ ಓದುವರೆಲ್ಲಾ
ಬಾಲಕೆ ಕೊಳ್ಳಿಯಿಟ್ಟುಕೊಂಡವರು
ಗಟ್ಟಿಯಿದ್ದುದು ನಿಲ್ಲುವುದಂತೆ
ಅನುಗಾಲ ; ಅನವರತ
ನೆಲೆಯ ಹಂಬಲವೇಕೆ
ನೋಡಿ ಆರಾಧಿಸಲಿಯೆಂಬುದೇಕೆ
ನಿನಗನಿಸಿದ್ದನ್ನು ನೀ ಬರೆದೊಗೆ
ಬೇಕಾದವರು ಎತ್ತಿ ಮುದ್ದಾಡುವರು
ಇತಿಹಾಸದ ಗರ್ಭಸೇರಲಿ
ಹಳವಂಡಗಳು ಬೇಕಾದಷ್ಟಿವೆ
ಅನಾಮಿಕರು ಜನಸಂಖ್ಯೆಯಲಿ
ಅರಳುತಲಿ ಮುದುಡುತಿವೆ ಕವಿತಾ-ಹೂಗಳು !
-ಹಿಪ್ಪರಗಿ ಸಿದ್ಧರಾಮ, ಧಾರವಾಡ
*****