ಕೂಡ್ಲಿಗಿಯಲ್ಲಿ ಗ್ರಾಮೀಣ ಮಾರ್ಟ್ ಉದ್ಘಾಟನೆ: ಐದು ವರ್ಷದಲ್ಲಿ 5 ಕೋಟಿ ವ್ಯವಹಾರ ಸಾಧಿಸಿ -ನಿರಜ್‍ಕುಮಾರ್ ವರ್ಮಾ

ಕೂಡ್ಲಿಗಿ:  ಪಟ್ಟಣದಲ್ಲಿ ನಬಾರ್ಡ ಟಿಡಿಎಫ್/ಎಫ್‍ಪಿಒ ಯೋಜನೆ ಅಡಿ ಆರಂಭಿಸಲಾಗಿರುವ ಗ್ರಾಮೀಣ ಮಾರ್ಟ್ ಬರುವ 5 ವರ್ಷಗಳಲ್ಲಿ 5 ಕೋಟಿ ರೂ. ವ್ಯವಹಾರ ಸಾಧಿಸಬೇಕು ಎಂದು ನಬಾರ್ಡ್ ಕರ್ನಾಟಕ ವಿಭಾಗದ ಮುಖ್ಯ ವ್ಯವಸ್ಥಾಪಕ ನಿರಜಕುಮಾರ್ ವರ್ಮಾ ಹೇಳಿದರು.
ಕೂಡ್ಲಿಗಿ ಪಟ್ಟಣದ ಬೊಮ್ಮಘಟ್ಟ ರಸ್ತೆಯಲ್ಲಿ ಆರಂಭಿಸಲಾಗಿರುವ ಗ್ರಾಮೀಣ(ರೂರಲ್) ಮಾರ್ಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಬಾರ್ಡ್‍ನ ಆರ್ಥಿಕ ನೆರವಿನೊಂದಿಗೆ ಹಾಗೂ ಮದರ್ ಎನ್ನುವ ಎನ್‍ಜಿಒ ಮಾರ್ಗದರ್ಶನದಲ್ಲಿ ಕಾಯಕಲ್ಪ ರೈತ ಉತ್ಪಾದಕರ ಸಂಘ ಈ ಗ್ರಾಮೀಣ ಮಾರ್ಟ್ ಆರಂಭಿಸಲಾಗಿದೆ. ಗುರಿಬಸಾಧನೆಗೆ ಬೇಕಾದ ಅಗತ್ಯ ಸಹಕಾರವನ್ನು ನಬಾರ್ಡ್ ನೀಡಲಿದೆ ಎಂದರು.
ರೈತ ಉತ್ಪಾದಕ ಸಂಘಗಳು ಈ ರೀತಿಯ ಗ್ರಾಮೀಣ ಮಾರ್ಟ್ ತೆರೆಯುವುದರಿಂದ ರೈತರಿಗೆ ಅನುಕೂಲವಾಗಲಿದೆ ಹಾಗೂ ಈ ರೈತ ಉತ್ಪಾದಕರ ಸಂಘ(ಎಫ್‍ಪಿಒ)ದ ಸದಸ್ಯರಿಗೂ ಉತ್ತಮ ಆದಾಯ ಗಳಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ನಬಾರ್ಡ್ ಬಳ್ಳಾರಿ ಜಿಲ್ಲಾ ವ್ಯವಸ್ಥಾಪಕರಾದ ಅಪರ್ಣಾ ಕೋಲ್ತೆ ಅವರು ಮಾತನಾಡಿ ಗ್ರಾಮೀಣ ಮಾರ್ಟ್ ಉದ್ದೇಶ ಮತ್ತು ರೈತ ಉತ್ಪಾದಕರ ಸಂಘಗಳಿಗಾಗುವ ಲಾಭಗಳು ಹಾಗೂ ನಬಾರ್ಡ್‍ನ ಅರ್ಥಿಕ ಸಹಕಾರ ಹಾಗೂ ಮಾರ್ಗದರ್ಶನವನ್ನು ನೆರೆದಿದ್ದ ರೈತರಿಗೆ ವಿವರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಮಾತನಾಡಿ ಎಫ್‍ಪಿಒ ಚಟುವಟಿಕೆಗಳಿಗೆ ನಮ್ಮ ಬ್ಯಾಂಕ್‍ಗಳು ಸದಾ ಬೆಂಬಲ ನೀಡಲಿದ್ದು, ರೈತರು ನಿಗದಿಪಡಿಸಿದ ಅವಧಿಯೊಳಗೆ ಅಗತ್ಯ ದಾಖಲೆಗಳನ್ನು ಒದಗಿಸಿದ್ದಲ್ಲಿ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ನೀಲಪ್ಪ ಅವರು ಮಾತನಾಡಿ ಈ ಪ್ರದೇಶದಲ್ಲಿ ತೋಟಗಾರಿಕೆ ಪ್ರದೇಶದ ಅಭಿವೃದ್ಧಿಗೆ ತಮ್ಮೊಂದಿಗೆ ಶ್ರಮಿಸಲಿದೆ ಎಂದರು.
ಮದರ್ ಸ್ವ ಸಹಾಯ ಸಂಘದ ಯೋಜನಾ ನಿರ್ದೇಶಕ ವೀರಭಾಸ್ಕರ್, ಸುಸ್ಥಿರ ಸಂಸ್ಥೆಯ ಸುಬ್ಬಾರೆಡ್ಡಿ, ಎಸ್3ಐಡಿಎಫ್ ಸಂಸ್ಥೆಯ ಶಶಿಕಾಂತ್,ಗೋಪಾಲ್, ಕಾಯಕಲ್ಪ ರೈತ ಉತ್ಪಾದಕರ ಸಂಘದ ಅಧ್ಯಕ್ಷರು,ಕಾರ್ಯದರ್ಶಿಗಳು,ನಿರ್ದೇಶಕರು, ಮದರ್ ಸಂಸ್ಥೆಯ ಸಿಬ್ಬಂದಿ ಹಾಗೂ ರೈತರು, ಮದರ್ ಸಂಸ್ಥೆಯ ಪ್ರೋಜೆಕ್ಟ್ ಕೋ-ಆರ್ಡಿನೇಟರ್ ಆರ್.ಕೆ.ನಾಗರಾಜ ಅವರು ನಿರೂಪಿಸಿ ವಂದಿಸಿದರು. ರೈತರು ತಮ್ಮ ಅಭಿಪ್ರಾಯಗಳನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.