ಬಳ್ಳಾರಿ: ಇದೇ ಮಾ.29ರಂದು ಕೂಡ್ಲಿಗಿ ಪಟ್ಟಣ ಪಂಚಾಯಿತಿಯ ಉಪ ಚುನಾವಣೆಯ ಮತದಾನ ಮತ್ತು ಮಾ.31 ರಂದು ಮತ ಎಣಿಕೆ ನಡೆಯಲಿದೆ.
ಈ ದಿನಗಳಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮದ್ಯ ಮಾರಾಟ ಮತ್ತು ಸಾಗಾಣಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕೂಡ್ಲಿಗಿ ಪಟ್ಟಣ ಪಂಚಾಯಿತಿಯ ವಾರ್ಡ್ ನಂ.1 ಮತ್ತು ವಾರ್ಡ್ 12ರ ವ್ಯಾಪ್ತಿಯಲ್ಲಿ ಮಾ.27ರ ಮಧ್ಯರಾತ್ರಿ 12ರಿಂದ ಮಾ.29ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ನಡೆಯುವ ಕೂಡ್ಲಿಗಿ ತಾಲೂಕು ಕೇಂದ್ರದಲ್ಲಿ ಮಾ.30ರ ಮಧ್ಯರಾತ್ರಿ 12ರಿಂದ ಮಾ.31ರ ಸಂಜೆ 6ರವರೆಗೆ ಎಲ್ಲ ತರಹದ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದ್ದಾರೆ.
ಈ ಆದೇಶವನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಅಬಕಾರಿ ಉಪ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜರುಗಿಸಬೇಕು ಎಂದು ಅವರು ತಮ್ಮ ಆದೇಶಪತ್ರದಲ್ಲಿ ತಿಳಿಸಿದ್ದಾರೆ.
—