ಬಳ್ಳಾರಿ: ಮೇ 9ರಂದು ನಡೆಯುವ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಸೋಮವಾರ(ಏ.5) ನಾಮಪತ್ರ ಸಲ್ಲಿಸುವರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿತೈಷಿಗಳು, ಬೆಂಬಲಿಗರ ಒತ್ತಾಯದಿಂದ ನಾಲ್ಕನೇ ಬಾರಿ ಸ್ಪರ್ಧಿಸಲು ಬಯಸಿದ್ದೇನೆ ಎಂದು ಹೇಳಿದರು.
2004 ಮತ್ತು 2011ರಲ್ಲಿ ಎರಡು ಬಾರಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಆಯ್ಕೆಯಾಗಿ ಕನ್ನಡ ಸೇವೆಯನ್ನು ಕಾಯಾ ವಾಚಾ ಮನಸಾ ಮಾಡಿದ ಫಲವಾಗಿ ಮತ್ತೇ ಕಣಕ್ಕಿಳಿಯಲು ಹಿತೈಷಿಗಳಿಂದ ಒತ್ತಾಯ ಬಂದ ಹಿನ್ನಲೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ತಾವು ಆಯ್ಕೆಯಾದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಆಯೋಜಿಸಲು ಶ್ರಮಿಸುತ್ತೇನೆ.
ಜಿಲ್ಲೆ, ತಾಲೂಕು, ಹೋಬಳಿ ಜತೆ ಗ್ರಾಮಮಟ್ಟದ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡು ಹಳ್ಳಿಗಳಲ್ಲೂ ಕನ್ನಡದ ಕಂಪನ್ನು ಪಸರಿಸಲಾಗುವುದು. ವಿವಿಗಳ ಸಹಕಾರದೊಂದಿಗೆ ರಾಜ್ಯಮಟ್ಟದ ವಿಚಾರ ಸಂಕಿರಣ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕಮ್ಮಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಎಚ್.ಹಂಪನಗೌಡ, ಕಸಾಪ ಆಜೀವ ಸದಸ್ಯರಾದ ಡಾ. ಗದಗಿನ್, ವಿ ಎಸ್ ಮರಿದೇವಯ್ಯ, ಬಸವರಾಜ ಬಿಸಿಲಹಳ್ಳಿ, ಯೋಗ ನಾಗರಾಜ, ಬಳ್ಳಾರಿ ವೀರೇಶ್, ಚಂದ್ರಶೇಖರ್ ಆಚಾರ್, ಜನಕರಾಜ್ ಪತ್ತಾರ್, ಹಂದ್ಯಾಳ್ ಶಿವಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು