ಬಳ್ಳಾರಿ: ತಳ ಸಮುದಾಯಗಳು ಸಂಘಟಿತರಾಗುವ ಮೂಲಕ ಅಭಿವೃದ್ಧಿ ಹೊಂದ ಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಪ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ಹೇಳಿದರು.
ಜಿಲ್ಲಾಡಳಿತ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಂ ಅವರ 114ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ಬಾಬು ಜಗಜೀವನರಾಂ ಅವರ ತತ್ವಾದರ್ಶಗಳು,ಹಸಿರುಕ್ರಾಂತಿಯ ಪರಿಕಲ್ಪನೆ,ಶಿಕ್ಷಣ, ಸಂಘಟನೆ,ಹೋರಾಟದ ಬಗ್ಗೆ ವಿವರಿಸಿದ ಸಚಿವರು,
ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ತಳಸಮುದಾಯಗಳು ಪ್ರಗತಿ ಕಾಣುತ್ತಿವೆ ಎಂದರು.
ಮತ್ತಷ್ಟು ಸಂಘಟಿತರಾಗಿ ಲಭ್ಯವಿರುವ ಸೌಲಭ್ಯ, ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸದ ವೈ.ದೇವೆಂದ್ರಪ್ಪ ಅವರು ಮಾತನಾಡಿ,ಇಂದು ನಾನು ಲೋಕಸಭಾ ಸದಸ್ಯರಾಗಿ ಕುಳಿತುಕೊಳ್ಳುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ. ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಬೇಕು;ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ,ಸಂಸದ ವೈ.ದೇವೇಂದ್ರಪ್ಪ ಅವರ ಜತೆ ಸಚಿವರು ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್. ಹನುಮಂತಪ್ಪ,ಜಿಪಂ ಸದಸ್ಯರಾದ ಎ.ಮಾನಯ್ಯ,ಮುಂಡ್ರಿಗಿ ನಾಗರಾಜ,ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಪ್ಪ ಸಾರಥಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಇದ್ದರು.
*****