ಚುನಾವಣೆಯ ನೀತಿ ಸಂಹಿತೆ ಜಾರಿ: ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಯಲ್ಲಿ ಡಿಪಾಸಿಟ್ ಮಾಡಲು ಡಿಸಿ ಮಾಲಪಾಟಿ ಆದೇಶ

ಬಳ್ಳಾರಿ: ಮಹನಾಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಏ.08 ರಿಂದ 30 ವರೆಗೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿರುವವರು ಶಸ್ತ್ರ, ಮದ್ದುಗುಂಡುಗಳನ್ನು ಇಟ್ಟುಕೊಂಡು ತಿರುಗಾಡುವುದನ್ನು ಜಿಲ್ಲಾ ದಂಡಾಧಿಕಾರಿಗಳು ನಿಷೇಧಿಸಿದ್ದಾರೆ.
ಪರವಾನಿಗೆದಾರರು ತಕ್ಷಣದಿಂದ ತಾವು ಹೊಂದಿದ ಶಸ್ತ್ರಾಸ್ತ್ರವನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಡಿಪಾಸಿಟ್ ಮಾಡುವಂತೆ ಜಿಲ್ಲಾದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಆತ್ಮ ರಕ್ಷಣೆಗಾಗಿ ಹಾಗೂ ಬೆಳೆ ರಕ್ಷಣೆಗಾಗಿ ಪರವಾನಿಗೆ ಹೊಂದಿದವರು ಶಸ್ತ್ರ ಮತ್ತು ಮದ್ದುಗುಂಡುಗಳನ್ನು ಹಿಡಿದುಕೊಂಡು ಓಡಾಡುವುದನ್ನು ದಂಡ ಸಂಹಿತೆ 1973 ಕಲಂ 144ರ ಅನ್ವಯ ನಿಷೇಧಿಸಲಾಗಿರುತ್ತದೆ. ಆದ್ದರಿಂದ ಪರವಾನಗಿದಾರರು ತಾವು ಹೊಂದಿದ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಡಿಪಾಸಿಟಿವ್ ಮಾಡಿಸಬೇಕೆಂದು ಅವರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ತಯಾರಕರು ಮತ್ತು ಮಾರಾಟಗಾರರು ಈ ನಿಷೇಧಾಜ್ಞೆ ಏ.08 ರಿಂದ 30ರವರೆಗೆ ಪರವಾನಗಿದಾರರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ಪ್ರತಿ ದಿನದ ಮಾರಾಟ ದಾಸ್ತಾನು ವ್ಯವಹಾರಗಳ ವಿವರವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಬೇಕು.
ಚುನಾವಣೆ ಮುಕ್ತಾಯಗೊಂಡ ಏ.30ರ ನಂತರ ಪರವಾನಗಿದಾರರಿಗೆ ಶಸ್ತ್ರ ಮತ್ತು ಮದ್ದುಗುಂಡುಗಳನ್ನು ಉಪಯೋಗಿಸಲು ಅನುಮತಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

*