ಸಾಹಿತ್ಯ ಸಾಂಸ್ಕೃತಿಕ ಪರಿಚಾರಿಕ
ಎಸ್ ಪಿ ಮಹದೇವ ಹೇರಂಬ ಅವರು ಬೆಂಗಳೂರು ಮಲ್ಲೇಶ್ವರಂ ಎಂಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಾಗಿ ಅಸ್ತಿತ್ವಕ್ಕೆ ತಂದಿರುವ ಭಾವದನಿ ಬಳಗ (ರಿ) ಸಂಸ್ಥಾಪಕರೂ ಆಗಿರುವ ಹೇರಂಭ ಅವರು ಕವಿಗಳಾಗಿಯೂ ಗಮನಸೆಳೆದಿದ್ದಾರೆ.
ಇವರ ಮೊದಲ ಕವನ ಸಂಕಲನ ಭಾವದನಿ ಪ್ರಕಟವಾಗಿದೆ.
ಇವರ ಸಾಹಿತ್ಯ ಚಟುವಟಿಕೆ ಗಮನಿಸಿ ಸಂಸ್ಥೆಯೊಂದು ಕರ್ನಾಟಕ ಕವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
👇”ಅನುದಿನ ಕವನ” ದ ಇಂದಿನ ಗೌರವಕ್ಕೆ ಹೇರಂಭ ಅವರ ‘ನಿರುತ’ ಕವಿತೆ ಪಾತ್ರವಾಗಿದೆ.👇
ನಿರುತ
……………..
ಪಾಪದ ಮೂಟೆಗಳ ಗೌಜಲ ಹೊತ್ತು
ಪ್ರತಿ ದಿವಸ ಪ್ರೇಮವ ಹುಡುಕುತ್ತಾ
ನಡೆವ ದಾರಿಯಲ್ಲಿ ನೆರಳುಕಂಡಾಗ
ತನ್ನ ಭಾವನೆಗಳ ಒಂದೊಂದೇ ಬಿಚ್ಚುತ್ತಾ
ಮನಸ್ಸು ಮೈನೆರೆಯಲು ಕಾಣುವ ಕನಸ್ಸಿಗೆ
ಬೇಲಿಯಾಗಿಬಿಡುತ್ತೇವೆ
ಕೊನೆಯ ತೀರ್ಪಿನವರೆಗೂ ಕಾಯದೇ
ಮಧ್ಯದಲ್ಲಿಯೇ ಮುಖ ಊದಿಸಿಕೊಂಡು
ಕಾವೇರಿಸಿ ಕಾದಾಡುವ ಮನುಜರ
ಮಣಭಾರದ ಮರ್ಜಿಗಳನ್ನ
ಮೈಗೆ ಮೆತ್ತಿಕೊಂಡಿರುತ್ತೇವೆ
ಹೊಟ್ಟೆಯೊಳಗಿನ ಉರಿ
ನೆತ್ತಿಗೇರಲು ಬಿಟ್ಟು
ಸುಡುವ ಅಸೂಯೆಯ ಬಸಿರುಮಾಡದೆ
ಕರುಳಿನ ಹುಣ್ಣಿಗೆ ನಗುವಿನ ಮುಲಾಮು
ತಡಕುತ್ತಿರುತ್ತೇವೆ
ಕಪಟವಿಲ್ಲದೆ ಜತನದಿಂದ ಕೂಡಿದ
ಬಾಂಧವ್ಯದ ಕಿರುಗನಸಿನ ಪರಿಚಾರಿಕೆಗೆ
ಇಲ್ಲಸಲ್ಲದ ಜರಡು ಮಾತನಾಡುತ
ಅಪನಂಬಿಕೆಯ ಮನಸ್ಥಿತಿಗಳ
ನಾಟಿಮಾಡುತ್ತಿದ್ದೇವೆ
ಕಾಡುವ ನೆನಪುಗಳ
ಎದೆಯ ಗೋರಿಯ ಮೇಲೆ
ಹಸಿರು ಗಿಡಗಳ ನೆಟ್ಟಿ
ಆದಷ್ಟು ಬೇಗನೆ ಹೂ ಬಿಟ್ಟರೆ ಸಾಕು
ಕೈಮುಗಿದು ದೇವರಾಗಿಸಲು
ಕಾಯುತ್ತಿರುತ್ತೇವೆ
-ಎಸ್ ಪಿ ಮಹದೇವ ಹೇರಂಬ