ಕರ್ನಾಟಕ ಕಹಳೆಯ ಜನಪ್ರಿಯ ‘ಅನುದಿನ ಕವನ’ ಕಾಲಂ ಅರಂಭಗೊಂಡು ಏ.೧೦ಕ್ಕೆ ನೂರು ದಿನಗಳಾದವು.
ಬಸವಣ್ಣ ಮತ್ತು ಅಕ್ಕಮಹಾದೇವಿ ಅವರ ಪ್ರಸಿದ್ಧ ವಚನಗಳು ನೂರು ದಿನಗಳ ಸಂಭ್ರಮವನ್ನು ಅರ್ಥಪೂರ್ಣಗೊಳಿಸಿವೆ.👇
ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ…
*****
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?
-ಬಸವಣ್ಣ
*****
ಬೆಟ್ಟದ ಮೇಲೊಂದು ಮನೆಯ ಮಾಡಿ….
*****
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾಜುನದೇವ ಕೇಳಯ್ಯ,
ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
-ಅಕ್ಕಮಹಾದೇವಿ