‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 101 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ನೂರಾ ಒಂದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ನಮ್ಮದು.
ಇಂದಿನ 101ನೇ “ಅನುದಿನ ಕವನ”ದ ಗೌರವಕ್ಕೆ ಕವಿ ಶ್ರೀ ಎಂ.ನಂಜುಂಡಸ್ವಾಮಿ (ಮನಂ) ಅವರ ‘ನನ್ನ ಹಾಡು ನನ್ನ ಯಜಮಾನ’ ಕವಿತೆ ಪಾತ್ರವಾಗಿದೆ. ವಿಶೇಷವೆಂದರೆ ಈ ಕವಿತೆ ರಾಗ ಸಂಯೋಜನೆಗೊಂಡು ಸಾಹಿತ್ಯ-ಸಂಗೀತ ಪ್ರಿಯರ ಮನಸೂರೆಗೊಂಡಿದೆ.
ಮನಂ ಅವರ ‘ ನನ್ನ ಹಾಡು ನನ್ನ ಯಜಮಾನ’ ಕವಿತೆಗೆ ಹಗರಿಬೊಮ್ಮನಹಳ್ಳಿಯ ಪ್ರತಿಭಾವಂತ ಸಂಗೀತ ಶಿಕ್ಷಕಿ ಶ್ರೀಮತಿ ಶಾರದ ಕೊಪ್ಪಳ ಅವರು ರಾಗ ಸಂಯೋಜಿಸಿ ಹಾಡಿದ್ದಾರೆ.
ಯುವ ಪ್ರತಿಭೆ ಹಗರಿಬೊಮ್ಮನಹಳ್ಳಿಯ ಪ್ರದೀಪ್ ಅಕ್ಕಸಾಲಿ ಅವರು ವಯೋಲಿನ್, ಮೊರಿಗೇರಿಯ ಯುವ ಪ್ರತಿಭೆ ಸಿ.ಕೊಟ್ರೇಶ್ ಅವರು ತಬಲ ಸಾಥ್ ನೀಡಿದ್ದಾರೆ. ಜತೆಗೆ ಉದಯೋನ್ಮುಖ ಯುವ ಗಾಯಕಿಯರಾದ ಹಗರಿಬೊಮ್ಮನಹಳ್ಳಿಯ ಗಾಯತ್ರಿ ಮತ್ತು ವರ್ಣಿಕಾ ಅವರು ಸಹ ಗಾಯಕರಾಗಿ ಗಮನ ಸೆಳೆದಿದ್ದಾರೆ.
(ಸಂಪಾದಕರು)
*****👇
‘ನನ್ನ ಹಾಡು ನನ್ನ ಯಜಮಾನ’
ನನ್ನ ಸಂತಸವ ಉಕ್ಕಿಸುವ,
ನನ್ನ ಮನವ ಮುದಗೊಳಿಸುವ,
ನನಗಾಗಿ ಹುಟ್ಟುವ ಹಾಡು,
ನನ್ನ ಹಾಡು ನನ್ನ ಯಜಮಾನ.
ನನ್ನ ಮೈ ಮರೆಯಿಸುವ,
ನನ್ನ ನಶೆಯೊಳು ನುಸುಳಿಸುವ,
ನನಗಾಗಿ ಕೆದರುವ ಹಾಡು,
ನನ್ನ ಹಾಡು ನನ್ನ ಯಜಮಾನ.
ನನ್ನ ಕನಸುಗಳ ಕಟ್ಟುವ,
ನನ್ನ ಗಳಿಗೆಗಳ ಗೆಲ್ಲಿಸುವ,
ನನಗಾಗಿ ಒಸೆಯುವ ಹಾಡು,
ನನ್ನ ಹಾಡು ನನ್ನ ಯಜಮಾನ.
ನನ್ನ ಆಸೆಗಳ ಮಸೆಯುವ,
ನನ್ನ ಭಾಷೆಯ ನೆರವೇರಿಸುವ,
ನನಗಾಗಿ ರಸವತ್ತಾದ ಹಾಡು,
ನನ್ನ ಹಾಡು ನನ್ನ ಯಜಮಾನ.
– ಮನಂ
—-