ನನ್ಮಪ್ಪ,
ಕುಲುಮೆಯ ಆರದ ಕಾವಿನ ನನ್ನಪ್ಪ ಒಮ್ಮೊಮ್ಮೆ
ಪಿಕಾಸಿ, ಗಡಾರಿ, ಫಳಫಳ ನಗುವ ಮಚ್ಚು
ಕಾದೂ ಕಾದೂ ಕರಗಿಬಿಡುವ ಬೆಣ್ಣೆ ಕಬ್ಬಿಣ
ಚೂಪು ನೇಗಿಲು ಮೂಗು
ರೆಟ್ಟೆಯನ್ನೂ ಮಾತಾಡಿಸುವ ಮಿಣಿ ಮೀಸೆ
ಕಣ್ಣು ಒಳಗೆ ಸುಡುವ,ಹೊರಗೆ ಕೊತಕೊತ ಕುದಿವ
ನಿಗಿನಿಗಿಯ ಆಲೆಮನೆಯ ಒಲೆ
ಮುರಿವ, ಬಗೆವ, ಅಗಿವ
ಸಿಗದಿದ್ದರೆ ಬೊಗಸೆಯಲ್ಲೇ ಬಸಿದು ಬದುಕೋ ಬಾಯಿ
ಬಣ್ಣ ನಾಟಕವಾಡುವ ಬಿಳಿಯಲ್ಲ,ಈ ನೆಲದ ನಿಜ
ಗಾಣದ ಬದುಕಿನ ಕಬ್ಬಿಗ
ಇವನದ್ದು ವರ್ಷಕ್ಕೆ ಎರಡೇ ಕಾವ್ಯ
ಮುಂಗಾರಿಗೊಂದು, ಹಿಂಗಾರಿಗೊಂದು
ಹೊಟ್ಟೆ ತಣ್ಣಗಾಗಿಸೋ ಕಬ್ಬಿನಂತಹ ಕಬ್ಬ
ಮನಸು ಬಣ್ಣದಂತೆಯೇ ಕರಿಜಾಲಿ ಕೊರಡು
ತಡವಿದರೆ ತಳಕ್ಕೀಳಿವ ಉದ್ದ ಮುಳ್ಳು
ಕೆತ್ತಿದರೆ ಕಚಗುಳಿ ಇಡುವ ಬುಗುರಿ
ಅಲುವೆಯರಸ ಬಾಚಣಿಗೆ ಮುಟ್ಟಲಿಲ್ಲ
ಬಿಗಿದು ಅಲುವೆ ಬಾಚುತ್ತಿದ್ದ ಅಮ್ಮಮ್ಮನ ತಲೆ
ಕುಚ್ಚು ಕಟ್ಟಿ ಕಾಳಿನ ಬಿಲ್ಲೆ ಜೋಡಿಸಿ ಜಡೆ ಹೆಣೆಯುತ್ತಿದ್ದ
ತಾಯ್ಮಗನ ಪ್ರೀತಿಗೆ ಕಾಳು ಕೊನರಿ
ತೆನೆ ಬಾಣಂತನಕ್ಕೂ ಮುನ್ನವೇ ಹಾಲುಣಿಸುತ್ತಿತ್ತು
ಅಪ್ಪ ಅದೇ ಕುಲುಮೆಯ ಕೆಂಡದಂತೆ ಉರಿಯುತ್ತಾನೆ
ಮತ್ತೆ ಕೂರಿಗೆಯಾಗಲು, ಕುಡಗೋಲಾಗಲು
-ಬಸವರಾಜ ಕಹಳೆ