ಮೈಸೂರು: ವಿಶ್ವಜ್ಞಾನಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ಪತ್ರಿಕಾರಂಗಕ್ಕೂ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ, ಮಾಧ್ಯಮ ತಜ್ಞೆ ಡಾ.ಎನ್.ಉಷಾರಾಣಿ ಎಂದು ಹೇಳಿದರು.
ನಗರದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಮತ್ತು ಸಿರಿ ಸಮೃದ್ಧಿ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮದಿನಾಚರಣೆ ಮತ್ತು ಕರ್ನಾಟಕ ಕಹಳೆ ಡಾಟ್ ಕಾಮ್ ನ ಅಂಕಣಕಾರ ಡಾ.ಅಮ್ಮಸಂದ್ರ ಸುರೇಶ್ ಅವರ ಅಂಬೇಡ್ಕರ್ ಬೆಳಕಿನಲ್ಲಿ ಪತ್ರಿಕೋದ್ಯಮ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಸುಧಾರಣೆಗಾಗಿ ಪತ್ರಿಕೆಗಳನ್ನು ಆರಂಭಿಸಿದ ಅಂಬೇಡ್ಕರ್ ಸಮಾನತೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಮೂಕನಾಯಕ, ಬಹಿಷ್ಕೃತ ಭಾರತ, ಜನತಾ ಹಾಗೂ ಪ್ರಬುದ್ಧ ಭಾರತ ಪತ್ರಿಕೆಗಳನ್ನು ಆರಂಭಿಸುವ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆಯನ್ನು ನೀಡಿದರು ಎಂದು ಅಭಿಪ್ರಾಯಪಟ್ಟರು.
ಪತ್ರಿಕೆಗಳು ಚಳವಳಿಯ ಅಸ್ತ್ರವಾಗಬೇಕು ಎಂದು ಡಾ.ಅಂಬೇಡ್ಕರ್ ಪ್ರತಿಪಾದಿಸುತ್ತಿದ್ದ ಅವರು ದನಿ ಇಲ್ಲದ ಸಮುದಾಯಗಳಿಗೆ ದನಿಯಾಗಿದ್ದರು. ಮಹಿಳಾಪರ ಹೋರಾಟ ಮಾಡಿದ ಮಹಾನ್ ಹೋರಾಟಗಾರ ಎಂದು ಶ್ಲಾಘಿಸಿದರು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ
ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದ ನಿರ್ದೇ ಶಕ ಪ್ರೊ.ಜೆ.ಸೋಮಶೇಖರ್ ಅವರು, ಮೂಕನಾಯಕ ಪತ್ರಿಕೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಆರಂಭಿಸಿ ಒಂದು ಶತಮಾನ ಕಳೆದರೂ ಮಾಧ್ಯಮರಂಗದಲ್ಲಿ ಸಮಾನತೆ ಇನ್ನೂ ಕನಸಿನ ಮಾತಾಗಿದೆ ಎಂದು ವಿಷಾಧಿಸಿದರು.
ಸಂಗೀತ ವಿವಿ ಕುಲಪತಿ ಡಾ. ನಾಗೇಶ್ ವಿ ಬೆಟ್ಟಕೋಟೆ ಅವರು ಅಧ್ಯಕ್ಷತೆ ವಹಿಸಿದ್ದರು. ಹೊಸಪೇಟೆ ಎಸ್ ಎಸ್ ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ವೆಂಕಟೇಶ್ ಅವರು ಕೃತಿ ಕುರಿತು ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿದ್ದ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಈ ಸಿ ನಿಂಗರಾಜೇಗೌಡ, ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎ ಕೆ ನಾಯಕ್, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಳ್ಳಾರಿಯ ಸಿ. ಮಂಜುನಾಥ್ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು,ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿ, ರಾಜ್ಯ ಘಟಕದ ಆಧ್ಯಕ್ಷ ಡಾ.ಸಿ.ವೆಂಕಟೇಶ್ ಉಪಸ್ಥಿತರಿದ್ದರು. ಕೃತಿಕಾರ ಡಾ.ಅಮ್ಮಸಂದ್ರ ಸುರೇಶ್ ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಜ್ಯೋತಿ ನಿರೂಪಿಸಿದರು. ಉಪನ್ಯಾಸಕ ಡಾ.ಪುರುಷೋತ್ತಮ್ ಕುಮಾರ್ ವಂದಿಸಿದರು.
ಪರಿವರ್ತನಾ ಗೀತೆ: ಹೆಚ್.ಡಿ.ಕೋಟೆಯ ಉನ್ನತಿ ಕಲಾ ಬಳಗದ ಉಮೇಶ್ ಮತ್ತು ತಂಡ ಹಾಗೂ ಸಂಗೀತ ವಿವಿಯ ವಿದ್ಯಾರ್ಥಿಗಳು ಪರಿವರ್ತನಾ, ಜಾಗೃತಿ ಗೀತೆಗಳನ್ನು ಹಾಡಿದರು.
*****