ಸಾವಿರಾರು ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ’ -ಡಿಡಿಪಿಯು ಬಿ ಆರ್ ನಾಗರಾಜಪ್ಪ

ಬಳ್ಳಾರಿ: ದೇಶದ ಸಾವಿರಾರು ಹೋರಾಟಗಾರರ ಬಲಿದಾನ,ಪರಿಶ್ರಮ,ತ್ಯಾಗ ಹೋರಾಟದ ಫಲವಾಗಿ ಪ್ರಸ್ತುತ ಸ್ವತಂತ್ರರಾಗಿ ಸುಖವಾಗಿ ಬಾಳುತ್ತಿದ್ದೇವೆ ಎಂದು
ಬಳ್ಳಾರಿ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಆರ್ ನಾಗರಾಜಪ್ಪ ಅವರು ತಿಳಿಸಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ,ಪ್ರಬಂಧ,ಚರ್ಚಾಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರ ಹೋರಾಟ ವಿದ್ಯಾರ್ಥಿಬಯುವ ಸಮೂಹಕ್ಕೆ ಸ್ಪೂರ್ತಿಯಾಗಬೇಕು.ಹೊಸ ಸಾಧನೆಗಳಿಗೆ ಪೂರಕವಾಗಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಬಂದು 74 ವರುಷಗಳು ಕಳೆದಿವೆ. ಯುವಕ ಯುವತಿಯರು ಸ್ವಾತಂತ್ರ್ಯ ಚಳುವಳಿಗಳನ್ನು ನೆನಪಿಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದಿಂದ ಪ್ರೇರಿತರಾಗಿ ದೇಶ ಭಕ್ತಿ ಹೆಚ್ಚಿಸಿಕೊಂಡು ನಾಡನ್ನು ಕಟ್ಟಲು ಮುಂದೆ ಬರಬೇಕು ಎಂದರು.
ಯುವಕರು ಸ್ವಾರ್ಥ ಬಿಟ್ಟು ದೇಶಕ್ಕಾಗಿ ಬದುಕಬೇಕೆಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಬಳ್ಳಾರಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅದ್ಯಕ್ಷ ಎಂ. ಮೋಹನ ರೆಡ್ಡಿ ಅವರು ಮಾತನಾಡಿ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಲಕ್ಷಾಂತರ ಜನ ತ್ಯಾಗ ಮಾಡಿದ್ದಾರೆ. ಸಾವಿರಾರು ಜನ ಹುತಾತ್ಮರಾಗಿದ್ದಾರೆ ಎಂಬುದನ್ನು ಯುವ ಜನತೆ ಮರೆಯಬಾರದು. ಪ್ರತಿಭಾ ಪಲಾಯನ ಒಳ್ಳೆಯದಲ್ಲ.
ವಿದೇಶದಲ್ಲಿ ಆಕರ್ಷಕ ಸಂಬಳ, ಸೌಲಭ್ಯಕ್ಕಾಗಿ ನೆಲಸಿ ಆ ದೇಶಗಳ ಅಭಿವೃದ್ಧಿಗೆ ದುಡಿಯದೆ ನಮ್ಮ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಎಂ ಮಹಾಲಿಂಗನ ಗೌಡ, ದೇಶದ ಅನೇಕ ಸಮಸ್ಯೆಗಳಿಗೆ ಶಿಕ್ಷಣವೇ ಅಸ್ತ್ರ ವಾಗಿದೆ ಎಂದರು.
ಉತ್ತಮ ಶಿಕ್ಷಣವು ವಿದ್ಯಾರ್ಥಿ-ಯುವಜನರ, ನವಭಾರತದ ನಿರ್ಮಾಣಕ್ಕೆ ಸಹಕಾರಿಯಾಗಲಿ ಎಂದು ಆಶಿಸಿದರು.
ಜಿಲ್ಲಾ ಉಪನ್ಯಾಸಕರ ಸಂಘದ ಅದ್ಯಕ್ಷ ಡಾ.ರಾಜಣ್ಣ ಮಾತನಾಡಿದರು.
ಉಪನ್ಯಾಸಕರಾದ ಶ್ಯಾಮಣ್ಣ, ಕುಮಾರಸ್ವಾಮಿ,ಡಾ.ಯು.ಶ್ರೀನಿವಾಸ ಮೂರ್ತಿ, ಸಂಗಮೇಶ್ವರ, ಚಾಂದ್ ಪಾಷಾ ಕಾರ್ಯಕ್ರಮ ನಿರ್ವಹಿಸಿದರು.
ಬಳ್ಳಾರಿ ನಗರದ ಪಿಯು ವಿದ್ಯಾರ್ಥಿಗಳಿಗೆ ರಸಪ್ರಶ್ನೆ,ಪ್ರಬಂಧ,ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು.