ಅವನೆಂದರೆ ಹಾಗೆಯೇ (ಗಜಲ್)
*****
ಅವನೆಂದರೆ ಹಾಗೆಯೇ ಮನಸ್ಸಿಗೆ ಹತ್ತಿರವಾಗುತ್ತಿದ್ದಂತೆ ಮತ್ತೆ ಮತ್ತೆ ಪ್ರೀತಿಸುತ್ತಾನೆ..
ನಿನ್ನನ್ನಷ್ಟೇ ಅಲ್ಲ ಈ ಜಗದ ಎಲ್ಲರನ್ನು ಸಪ್ಪಳವಾಗದಂತೆ ಪ್ರೀತಿಸುತ್ತಾನೆ..
ಅವನೆಂದರೆ ಹಾಗೆಯೇ ನೋಡುತ್ತಿರುವಂತೆ ತಥಾಗತನ ಕೈಹಿಡಿದು ಬಿಡುತ್ತಾನೆ..
ನೀ ಕೊಸರಿ ಕೊಳ್ಳದಂತೆ ಮೌನವಾಗಿಸಿ ನೀನೇ ಮೋಹಿಸುವಂತೆ ಪ್ರೀತಿಸುತ್ತಾನೆ….
ಅವನೆಂದರೆ ಹಾಗೆಯೇ ನೆಲಮುಗಿಲು ಗಳನ್ನು ಮೀರುವ ಕಣ್ಣೋಟದವನು..
ನೀ ಮಾತನಾಡಿದರೆ ಸಾಕು ಮಾತುಗಳಲ್ಲೇ ನಿನ್ನನ್ನು ಬಂಧಿಸುವಂತೆ ಪ್ರೀತಿಸುತ್ತಾನೆ…
ಅವನೆಂದರೆ ಹಾಗೆಯೇ ತನ್ನ ಬದುಕಿನ ಪುಟಗಳನ್ನು ಪ್ರೀತಿಯ ದೊರೆಯದವರ ಮತ್ಲಾವಾಗಿಸಿದವನು.. ನೀನೊಮ್ಮೆಓದಿದೆಯಾದರೆ ಕಷ್ಟಗಳರಿತು ನಿನ್ನ ಬದುಕು ಸುಂದರವಾಗುವಂತೆ ಪ್ರೀತಿಸುತ್ತಾನೆ…
ಅವನೆಂದರೆ ಹಾಗೆಯೇ ಲೋಕದ ಪ್ರೀತಿ ಹಸಿದು ಹಂಬಲಿಸಿ ಹಡೆದ ಕೂಸಾದವನು..
ಏನು ಮಾಡಲಿ ನಿನ್ನ ಪ್ರೀತಿಸಲು ಪದಗಳಿಲ್ಲದಿರುವಲ್ಲಿ ಅವನು ಆಕಾಶದಷ್ಟು ಪ್ರೀತಿಸುತ್ತಾನೆ..
ಅವನೆಂದರೆ ಹಾಗೆಯೇ ಜಗದ ಜಾತ್ಯಾತೀತ ನೆಲದಲ್ಲಿ ನಿಂತು ಮನುಕುಲವ ಒಂದಾಗಿಸಿದವನು.. ನೀ ನೋಡಿದಿಯಾದರೆ ಸಾಕು ನಿನ್ನನ್ನು ಕಣ್ಣಲ್ಲೇ ಸೆರೆಹಿಡಿದು ವಿಶ್ವಮಾನವನಾಗು ವಂತೆ ಪ್ರೀತಿಸುತ್ತಾನೆ…
ಅವನೆಂದರೆ ಹಾಗೆಯೇ ತನ್ನಂತೆಲ್ಲರ ಪ್ರೀತಿಸುವ ರಮೇಶನ ನಿಂತ ನೆಲಕೆ ಅನ್ನವಾದವನು..
ಭೀಮನಾರೆಂದು ಕೇಳಿದರೆ ಏನು ಹೇಳಲಿ ಅರಿತು ಬಿಡು ಒಮ್ಮೆ ನೀನರಿಯದ ನಿನ್ನನ್ನೇ ಗೌರವಿಸುವಂತೆ ಪ್ರೀತಿಸುತ್ತಾನೆ…
-ರಮೇಶ ಗಬ್ಬೂರ್, ಗಂಗಾವತಿ
*****