ಅಧಿಕಾರಿಗಳು ಕೋವಿಡ್-19ನ ನಿಯಂತ್ರಣಕ್ಕೆ ಅಗತ್ಯ, ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು -ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್

ವಿಜಯನಗರ: ಜಿಲ್ಲೆಯ ಅಧಿಕಾರಿಗಳು ಕೋವಿಡ್-19ನ ನಿಯಂತ್ರಣಕ್ಕೆ ಅಗತ್ಯ, ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೂಲ ಸೌಕರ್ಯ ಅಭಿವೃದ್ದಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಹೊಸಪೇಟೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಭಾನುವಾರ ಕೋವಿಡ್-19 ನಿಯಂತ್ರಣ ಕುರಿತ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹೊಸಪೇಟೆ ತಾಲ್ಲೂಕಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಸಾಮಾಜಿಕ(ದೈಹಿಕ) ಅಂತರದ ಜತೆ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ನ್ನು ಉಪಯೋಗಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ತಿರುಗಾಡ ಬಾರದು, ಹೋಂ ಐಸೋಲೇಶನ್ ನಲ್ಲಿರುವವರ ಮೇಲೆ ತೀವ್ರ ನಿಗಾವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಸಚಿವರು,
ಸೊಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಹೊಸಪೇಟೆ ಉಪ ವಿಭಾಗದ ಆಯುಕ್ತ ಸಿದ್ದರಾಮೇಶ್ವರ, ತಹಶೀಲ್ದಾರ್ ಹೆಚ್.ವಿಶ್ವನಾಥ್, ಡಿವೈಎಸ್ಪಿ ರಘುಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭಾಸ್ಕರ್ ಹಾಗೂ ನಗರಸಭೆಯ ಪೌರಯುಕ್ತ ಮನ್ಸೂರು ಅಲಿ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
*****