ಅನುದಿನ ಕವನ-೧೧೬, ಕವಯತ್ರಿ:ಧರಣೀಪ್ರಿಯೆ, ಕವನದ ಶೀರ್ಷಿಕೆ: ಜೊತೆ ಜೊತೆಯಲಿ

                           ಜೊತೆ ಜೊತೆಯಲಿ
(ಭಾಮಿನಿ ಷಟ್ಪದಿಯಲ್ಲಿ)
**************
ಬಿಸಿಲುಯಿದ್ದರು ಮಳೆಯು ಬಂದರು
ಕುಸಿದುಹೋಗದೆ ಜೊತೆಯಲಿರುತಲಿ
ಬೆಸೆದ ಬಂಧದಿ ನಾವು ಜಗದಲಿ ಜೋಡಿಯಾಗಿರಲು|
ಹಸಿದುಕೊಂಡರು ಹರುಷವಿದ್ದರು
ಜಸವ ಕಾಣಲು ಬದುಕ ನಡೆಸುತ
ಹುಸಿಯನಾಡದೆ ಕೊಟ್ಟಮಾತಿಗೆ ಬಿಡದೆ ಜೀವನದಿ||

ಜೋಡಿ ಯಾಗುತ ಬೈಸಿಕಲ್ಲಲಿ
ಕೋಡಿಹರಿಯುವ ಮಳೆಯು ಬಂದರು
ಜೋಡಿಬಣ್ಣದಕೊಡೆಯಹಿಡಿಯುತ ಹಾದಿ ಬೀದಿಯಲಿ|
ಮೋಡಿಮಾಡುತ ಚೆಂದದಿಂದಲಿ
ಬೇಡಿಕೊಳ್ಳುತ ನೆನೆದು ದೇವರ
ತೋಡಿಕೊಂಡೆವು ನಮ್ಮಕಷ್ಟವ ಕಡಿಮೆ ಮಾಡೆನುತ||

ದಿನವದೂಡುತ ನಾವು ನಗುತಲಿ
ಮನದಿಸಂತಸಪಡುತ ಸಾಗಲು
ಸನಿಹವಾಗಲು ಹಗಲುರಾತ್ರಿಯು ಸವಿಯೊಲವಬೆರಸಿ||
ಮನೆಯಮಂದಿಯ ಸುಖವ ಬಯಸುತ
ಜನರಮನ್ನಣೆ ನಾವು ಪಡೆಯುತ
ಜನುಮಸಾರ್ಥಕಪಡಿಸಿಕೊಳ್ಳಲು ನಾವು ದುಡಿಯುತಲಿ||

-ಧರಣೀಪ್ರಿಯೆ
ದಾವಣಗೆರೆ
*****