“ಇಂದು ( ಏ.27) ಸಂಜೆಯಿಂದ ಮತ್ತೊಮ್ಮೆ ಲಾಕ್ ಡೌನ್ ಎಂಬ ಅನಿವಾರ್ಯ ಶಿಕ್ಷೆ. ಕಳೆದ ವರ್ಷದ ದುರಂತಗಳಿಂದ ಪಾಠ ಕಲಿಯದೆ, ಉಡಾಫೆ, ಅಜಾಗ್ರತೆಗಳಿಂದ ಮೆರೆದು ನಮಗೆ ನಾವೇ ತಂದುಕೊಂಡ ಪರಿಸ್ಥಿತಿ ಇದು. ಅವರಿವರನ್ನು, ಅಧಿಕಾರಸ್ಥರನ್ನು ಹಳಿದು ಪ್ರಯೋಜನವಿಲ್ಲ. ಈಗಲಾದರೂ ಕೊರೋನಾ ನಿಯಮಾವಳಿಗಳನ್ನು ಅಲಕ್ಶ್ಜಿಸದೆ ಅನುಸರಿಸಿ, ಜೀವ-ಜೀವನಗಳನ್ನು ರಕ್ಷಿಸಿಕೊಳ್ಳಬೇಕಿದೆ. ಜೊತೆಗೆ ಮಾನವೀಯತೆಯನ್ನು ತೊರೆಯದೆ ಅಕ್ಕ-ಪಕ್ಕದವರ ಸಂಕಷ್ಟಕ್ಕೂ ಆಸರೆಯಾಗಬೇಕಿದೆ. ಪ್ರೀತಿ, ಕರುಣೆ, ಪರಸ್ಪರ ಸಹಕಾರಗಳಿಂದಲೇ ಈ ಅಗ್ನಿಪರೀಕ್ಷೆಯನ್ನು ಗೆಲ್ಲಬೇಕಿದೆ. ಏನಂತೀರಾ.?”
ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
*****
ವಿನಂತಿ.!
ಜೀವಗಳನ್ನು ಉಳಿಸಿಕೊಳ್ಳಲು
ಇಂದಿನಿಂದ ಜೀವನಕ್ಕೇ ಬೀಗ.!
ತಡೆಯಲು ಸೋಂಕಿನ ರೋಗ
ಅಲಕ್ಷಿಸದೆ ಪಾಲಿಸಲೇಬೇಕಿದೆ
ಸ್ವಯಂ ಗೃಹಬಂಧನ ನಾವೀಗ.!
ನಾಳೆಗಳ ಕನಸು ರಕ್ಷಿಸಿಕೊಳ್ಳಲು
ನಮಗೆ ನಾವೇ ವಿಧಿಸಿಕೊಳ್ಳಬೇಕಿದೆ
ಮನೆಯೊಳಗೆ ಈ ಅಜ್ಞಾತವಾಸ.!
ಹೊರಗೆ ಬಂದರೆ ಶ್ವಾಸಕ್ಕೆ ತ್ರಾಸ
ಇದೆಂತಹ ಘೋರ ವಿಪರ್ಯಾಸ?
ಜಾಗೃತರಾಗದೆ ಪಾಠ ಕಲಿಯದೆ
ಮಾಡಿಕೊಂಡ ಪಾಪಕರ್ಮವೋ.?
ಅರ್ಥವಾಗದ ಸೃಷ್ಟಿಧರ್ಮವೋ.?
ಭೂಮಿಯ ಭಾರ ಇಳಿಸುತ್ತಿರುವ
ಅನೂಹ್ಯ ನಿಸರ್ಗಮರ್ಮವೋ.?
ಉಳಿವವರಾರು? ಅಳಿವವರಾರು?
ಭವಿಷ್ಯ ವರ್ತಮಾನಗಳ ವಿಚಿತ್ರ
ತೂಗುಯ್ಯಾಲೆಯಲ್ಲಿದೆ ಬದುಕು.!
ಆದರೂ ಬದುಕಲೇಬೇಕಿದೆ ಈಗ
ಅರಸುತ್ತಾ ಭರವಸೆಯ ಬೆಳಕು.!
ಸಾಕಿನ್ನು ಇನ್ನಾದರೂ ಬಿಡೋಣ
ಸ್ವಾರ್ಥ ವಂಚನೆಗಳ ಧನದಾಹ
ನೆರೆಹೊರೆಗೂ ನೆರವಾಗೋಣ
ಸೇವೆ ಸಜ್ಜನಿಕೆ ಸನ್ನಡತೆಗಳಷ್ಟೇ
ಈಗ ನಮ್ಮೆಲ್ಲರನ್ನುಳಿಸುವ ಶಕ್ತಿ.!
-ಎ.ಎನ್.ರಮೇಶ್. ಗುಬ್ಬಿ.