ಮಾಧ್ಯಮಲೋಕ-೧೧ ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು

‘ಕುವೆಂಪು ಮತ್ತು ವೈಚಾರಿಕತೆ’
-ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಇಂದಿನ ವಿಶ್ವವನ್ನು ಆಳುವುದು ವೈಚಾರಿಕತೆಯೇ ಹೊರತು, ವ್ಯಕ್ತಿ ಅಥವಾ ಧರ್ಮಗಳಲ್ಲ. ಕುವೆಂಪು ಇಂದು ಜಗತ್ತಿನಲ್ಲಿ ಇಲ್ಲದಿದ್ದರೂ ಕೂಡ ಅವರ ವೈಚಾರಿಕತೆಗಳು ಮತ್ತು ವಿಶ್ವಮಾನವ ಸಂದೇಶ ಇಂದಿಗೂ ಜೀವಂತವಾಗಿವೆ. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಂದು ವ್ಯಾಪಕವಾದ ಬದಲಾವಣೆಗಳು ಮತ್ತು ಪ್ರಗತಿ ಸಾಧಿಸಿದ್ದರೂ ಮೌಡ್ಯ, ಅಂಧಶ್ರದ್ದೆ, ವರ್ಗ ತಾರತಮ್ಯಗಳು ಬೆಳೆಯುತ್ತಲೇ ಹೋಗುತ್ತಿವೆ. ಸ್ವಾರ್ಥ, ಅಧಿಕಾರ ಲಾಲಸೆ, ವಿಚಾರ ಶೂನ್ಯತೆ ಹೆಚ್ಚಿನ ಜನರನ್ನು ಆಕ್ರಮಿಸಿವೆ. ನಾವು ಭೌತಿಕವಾಗಿ ಬೆಳೆಯುತ್ತಿದ್ದರೂ ಆಂತರಿಕವಾಗಿ ವಿವಿಧ ಸಾಮಾಜಿಕ ರೋಗಗಳಿಂದ ಬಳಲುತ್ತಿದ್ದೇವೆ. ಸಮಾಜ ಸೇವೆ, ಸಾಹಿತ್ಯ, ಸಂಸ್ಕೃತಿ, ಮಾನಸಿಕ ಮತ್ತು ಸಾಮಾಜಿಕ ವಿಶಾಲತೆಗಳಿಗಿಂತ ಹಣ ಗಳಿಸುವಿಕೆ ಅತ್ಯಂತ ಮುಖ್ಯವಾಗುತ್ತಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆಯೂ ಕೂಡ ಕುವೆಂಪುರವರ ವೈಚಾರಿಕ ಪ್ರಜ್ಞೆ ಇಂದಿನ ಸಂದರ್ಭಕ್ಕೆ ಅತ್ಯಗತ್ಯವಾಗಿದೆ. ‘ಸರ್ವೇ ಜನ ಸುಖಿನೋ ಭವಂತೂ’ ಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ವಿಶ್ವಮಾನವರಾಗಬೇಕಾಗಿದೆ. ಏನಾದರಾಗು ಮೊದಲು ಮಾನವನಾಗು ಎಂಬ ಕವಿವಾಣಿ ನಿತ್ಯನೂತನವಾಗಬೇಕಾಗಿದೆ. ಮನುಜಮತ-ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಈ ಪಂಚ ಸೂತ್ರಗಳು ಬದುಕಿನ ದಾರಿದೀಪಗಳಾಗಬೇಕು. ಮನುಷ್ಯನು ಜಾತಿ, ಮತದ ಹೆಸರಿನಲ್ಲಿ ಸಂಕುಚಿತ ಮನೋಭಾವದಿಂದ ಮತ್ತೊಬ್ಬರ ಘನತೆ ಮತ್ತು ವ್ಯಕ್ತಿತ್ವವನ್ನು ಗೌರವಿಸದೆ ಎಲ್ಲರನ್ನೂ ತನ್ನಂತೆಯೇ ಭಾವಿಸಿ ಸಮರಸ ಭಾವದಿಂದ ಮುಂದುವರೆಯಬೇಕೆಂಬ ಜೀವನ ಮಾರ್ಗವೇ ವಿಶ್ವಪಥ.
ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರ ಬನ್ನಿ
ಬಡತನವ ಬುಡಮಟ್ಟ ಕೀಳ ಬನ್ನಿ,
ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ.
ಎಂಬ ಕವನದಲ್ಲಿ ಕುವೆಂಪುರವರು ಧರ್ಮ, ಜಾತಿ, ಮತಗಳಿಗಿಂತ ಮನುಷ್ಯನಿಗೆ ಅಗತ್ಯವಾಗಿರುವುದು ಎರಡೊತ್ತಿನ ಊಟ ಎನ್ನುವ ಮೂಲಕ ಹೊಸ ಜಗತ್ತಿನ ನಿಯಮಗಳ ದಿಗ್ದರ್ಶನವನ್ನೇ ಮಾಡಿಸಿದ್ದಾರೆ. ನಮ್ಮಲ್ಲಿ ಬೆಳಸಿಕೊಂಡಿರುವ ಮೌಡ್ಯತೆಯನ್ನು ಹೊಡೆದೋಡಿಸಿ, ಆಸ್ತಿಕ ಸಮಾಜದ ಸಾಂಪ್ರದಾಯಿಕ ಸಂಕೋಲೆಗಳೆನ್ನು ಕಿತ್ತೆಸೆಯಲು ಕರೆ ನೀಡಿದ ಕುವೆಂಪು ನೂರು ದೇವರುಗಳ ನೂಕಾಚೆ ದೂರ ಎಂದು ಕರೆಕೊಡುವ ಮೂಲಕ, ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಚಲಿಸಬೇಕಾದ ಮಾನವೀಯತೆ ವೈಚಾರಿಕತೆಯ ನೆಲೆಯಲ್ಲಿ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ.
ಕುವೆಂಪು ಅವರಿಗೆ ಯುದ್ದದ ಕುರಿತು ಅರಿವು ಮತ್ತು ಪೂರ್ಣವಾದ ಪ್ರಜ್ಞೆ ಕೂಡ ಇತ್ತು. ಜಾತಿ,ಮತ, ಧರ್ಮಗಳ ಆಚೆ ಬನ್ನಿ ಎಂದು ಕರೆಕೊಡುವ ಮೂಲಕ ಶಾಂತಿ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕೆ ಕರೆ ನೀಡಿದರು. ಶೂದ್ರತಪಸ್ವಿಯಲ್ಲಿ ನಡೆಯುವ ರಾಮ ಮತ್ತು ಶಂಭೂಕನ ಯುದ್ದ, ಕಾಡಿನಲ್ಲಿ ನಡೆಯುವ ಪೌರುಷ ಯುದ್ದ, ಸ್ಮಶಾನ ಕುರುಕ್ಷೇತ್ರದಲ್ಲಿ ಸೃಷ್ಟಿಸಿರುವ ಸಾಮಾಜಿಕ ಪರಿಕಲ್ಪನೆಗಳೊಂದಿಗೆ ಕುವೆಂಪು ಯುದ್ದದಿಂದ ಆಗುವ ದುಷ್ಪರಿಣಾಮಗಳು ಹಾಗೂ ವಿನಾಶದ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.
ವರ್ಣಾಶ್ರಮ ಪದ್ದತಿಯನ್ನು ತಿದ್ದುವುದಲ್ಲ ಬದಲಾಗಿ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂಬುದು ರಸಋಷಿಯ ಆಶಯವಾಗಿತ್ತು. ಇಂಗ್ಲೀಷ್ ನ ನವೋದಯ ಕಾಲದ ರಮ್ಯ ಕವಿಗಳ ಪ್ರಭಾವಕ್ಕೊಳಗಾಗಿ ಬಿಗಿನರ್ಸ್ ಮ್ಯೂಸ್ ಎಂಬ ಆರು ಕವನಗಳ ಸಂಕಲನವನ್ನು 1922ರಲ್ಲೆ ರಚಿಸಿದ ಕುವೆಂಪು, ಇಗ್ಲೀಷ್ ಕವಿ ಜೇಮ್ಸ್ ಕಸಿನ್ ಸಲಹೆಯ ಮೇರೆಗೆ ಕನ್ನಡದಲ್ಲಿ ಸಾಹಿತ್ಯ ರಚಿಸಲು ತೊಡಗಿದರು. ಅವರ ಸಾಹಿತ್ಯ ಸೃಷ್ಠಿ ಎಂತಹವರನ್ನಾದರೂ ಬೆರಗುಗೊಳಿಸುವಂತದ್ದು. ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾಧ, ನಾಟಕ ಹೀಗೆ ಸಾಹಿತ್ಯದ ಎಲ್ಲಾ ರೂಪಗಳಲ್ಲಿಯೂ ಕೈಯ್ಯಾಡಿಸಿದ ಕೀರ್ತಿ ಅವರದು.
ಅವರ ನೇಗಿಲ ಯೋಗಿ ಪದ್ಯದ ಪ್ರತಿಯೊಂದು ಸಾಲೂ ಕೂಡ ನಿತ್ಯನೂತನವಾಗಿವೆ,
ಯಾರೂ ಅರಿಯದ ನೇಗಿಲಯೋಗಿಯೆ
ಲೋಕಕೆ ಅನ್ನವನೀಯುವನು..
ಹೆಸರನು ಬಯಸದೆ, ಅತಿ ಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ
ನೇಗಿಲ ಮೇಲೆ ನಿಂತಿದೆ ಧರ್ಮ
ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನಾಣ್ಣುಡಿಯನ್ನು ‘ನೇಗಿಲ ಕೊಳದೊಳಗಡಗಿದೆ ಕರ್ಮ, ನೇಗಿಲ ಮೇಲೆ ನಿಂತಿದೆ ಧರ್ಮ’ ಎಂದು ಹೇಳುವ ಮೂಲಕ ಪ್ರತಿಧ್ವನಿಸಿದ್ದಾರೆ. ಇಲ್ಲಿ ಧರ್ಮಕ್ಕಿಂತ ಕರ್ಮವೇ ಶ್ರೇಷ್ಠ ಎನ್ನುವ ರಾಷ್ಟ್ರಕವಿ, ರೈತ ಈ ದೇಶದ ಜೀವನಾಡಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಕೃಷಿಕ ಮತ್ತು ಕೃಷಿಯ ಮೇಲೆ ಇಂದಿಗೂ ಹೊಸಬೆಳಕನ್ನು ಚೆಲ್ಲುವ ನೇಗಿಲ ಯೋಗಿಯ ಸಾಲುಗಳು ಇಂದಿಗ ಯುವ ಜನಾಂಗಕ್ಕೆ ಅವುಗಳ ಅನಿವಾರ್ಯತೆಯನ್ನು ಮತ್ತು ಬದುಕಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುತ್ತವೆ.
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿದೆಯೇನು?
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!
ನೀರಡಿಸಿ ಬಂದ ಸೋದರನಿಗೆ ನೀರನು ಕೊಡಲು
ಮನುಧರ್ಮ ಶಾಸ್ತ್ರವೆನಗೊರಯಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆಬೇಕೇನು?
ಎಂಬ ಪ್ರಶ್ನೆಗಳನ್ನು ಜನರ ಮುಂದೆ ಇಡುವ ಮೂಲಕ ಜನರ ಮನಸ್ಸನ್ನು ಚಿಂತನೆಗೆ ಒಳಪಡಿಸುತ್ತಾರೆ. ಬಾಯಾರಿ ಬಂದ ಮನುಷ್ಯನಿಗೆ ಕುಡಿಯಲು ನೀರು ಕೊಡಲು ಮನುವಿನ ಅಪ್ಪಣೆಯ ಅಗತ್ಯವೇನು? ‘ಪಂಚಮರ ಮಗುವೊಂದು ಕೆರೆಯಲ್ಲಿ ಮುಳುಗುತಿರೆ, ದಡದಲ್ಲಿ ಮೀಯುತ್ತ ನಿಂತಿರುವ ನಾನು ಮುಟ್ಟಿದರೆ ಬ್ರಹ್ಮತ್ವ ಹೋಗುವುದೆಂದು ಸುಮ್ಮನಿದ್ದರೆ ಶಾಸ್ತ್ರಸಮ್ಮತವಧೇನು? ಎಂದು ಮನುಸಿದ್ದಾಂತವನ್ನು ಆಕ್ರೋಶದಿಂದ ಪ್ರಶ್ನಿಸುತ್ತಾರೆ. ಮನುಷ್ಯನಾದವನಿಗೆ ಆತ್ಮಸಾಕ್ಷಿಯೇ ಅತ್ಯಂತ ದೊಡ್ಡದು ಆತ್ಮಸಾಕ್ಷಿಯ ಮುಂದೆ ಎಲ್ಲಾ ಶಾಸ್ತ್ರಗಳು ಶೂನ್ಯ, ಮಾನವೀಯತೆಗೆ ವಿರುದ್ದವಾದ ಯಾವುದೇ ಶಾಸ್ತ್ರ ಅಥವಾ ಗ್ರಂಥಗಳು ಓದಲು ಯೋಗ್ಯವಾದವುಗಳಲ್ಲ ಬದಲಾಗಿ ಅವುಗಳನ್ನು ದೂರ ಬಿಸಾಡಿ ಎಂಬುದನ್ನು ಕುವೆಂಪು ಮಾರ್ಮಿಕವಾಗಿ ಈ ಕವನದಲ್ಲಿ ತಿಳಿಸಿದ್ದಾರೆ. ಆದ್ದರಿಂದಲೇ ಕುವೆಂಪುರವರ ವಿಚಾರಧಾರೆಗಳೂ ಇಂದಿಗೂ, ಎಂದೆಂದಿಗೂ ಪ್ರಸ್ತುತ.
ರಾಮಾಯಣ ಧರ್ಶನಂ, ಮಲೆಗಳಲ್ಲಿ ಮದುಮಗಳು, ಬೆರಳ್ ಗೆ ಕೊರಳ್, ಶೂದ್ರ ತಪಸ್ವಿ ಹಾಗೂ ಜಲಗಾರ ನಾಟಕಗಳಲ್ಲಿ ಇಲ್ಲಿ ಯಾರೂ ಮುಖ್ಯರೂ ಅಲ್ಲ, ಯಾರೂ ಅಮುಖ್ಯರೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವ ಜೊತೆಗೆ ಜಾತಿಗಿಂತ ಮಾನವೀಯತೆಯೇ ಮುಖ್ಯ ಅದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ಶೂನ್ಯ ಎಂದು ಪ್ರತಿಪಾದಿಸುತ್ತಾರೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಅತೀಂದ್ರಿಯವಾದ ಹೊಳಹುಗಳನ್ನು ಕಾಣಬಹುದು. ಗುಡ್ಡದಯ್ಯ ಅದರ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾನೆ. ಕಾದಂಬರಿಯಲ್ಲಿ ಹೆಣ್ಣಿನ ವಾಸನೆ, ಮಧ್ಯದ ವಾಸನೆ, ಬಾಡಿನ ವಾಸನೆ ಹೀಗೆ ಎಲ್ಲವೂ ಸಮ್ಮಿಳಿತಗೊಂಡಿವೆ. ಕಾದಂಬರಿಯಲ್ಲಿ ಬರುವ ಯಾವ ಪಾತ್ರವೂ ಕೂಡ ವಿಶೇಷವಾದುದಾಗಬೇಕೆಂದು ಹಾತೊರೆಯುವುದಿಲ್ಲ. ಪ್ರತಿಯೊಂದು ಪಾತ್ರವೂ ಇದ್ದುದ್ದನ್ನು ಇದ್ದ ಹಾಗೆ ನೇರವಾಗಿ ಅನುಭಿಸುತ್ತವೆ.
ಕುವೆಂಪು ಕಾದಂಬರಿಗಳು ಕೇವಲ ಕಥೆಯನ್ನು ಓದುವ ಕೃತಿಗಳಲ್ಲ ಬದಲಾಗಿ ಒಂದು ಪ್ರಾದೇಶಿಕತೆಯ ಜನಜೀವನದ ಪರಿಪೂರ್ಣ ದರ್ಶನದ ದೃಷ್ಟಿಯಿಂದ ಅವಲೋಕಿಸಬಹುದಾದ ಕೃತಿಗಳಾಗಿವೆ. ಗುತ್ತಿ ಮತ್ತು ಅವನ ನಾಯಿ,ಹುಲಿಯನ ಸಹವಾಸ, ನಾಯಿಯಿಂದಲೇ ಗುತ್ತಿ ನಾಯಿಗುತ್ತಿಯಾದ ಮನುಷ್ಯ ಮತ್ತು ಪ್ರಾಣಿಗಳ ನುಡುವಿನ ಸಂಬಂಧ, ತುಂಗಾನದಿಯ ವೇಗಕ್ಕೆ ನಾಯಿ ಹುಲಿಯಾ ಕಣ್ಮರೆಯಾಗುವ ಸನ್ನಿವೇಶ ಮಾನವೀಯತೆಗೆ ಹಿಡಿದ ಕನ್ನಡಿಯಂತಿದೆ.
ನನಗೇಕೆ ಶಿವಗುಡಿಯ ಯಾತ್ರೆ, ಕರ್ಮವೇ ಆರಾಧನೆ, ಸೇವೆಯೇ ಪೂಜೆ, ಪೊರಕೆ ಎನ್ನ ಭಾಗದ ಆರತಿ, ಗುಡಿಸುವುದೇ ನನ್ನ ದೇವರ ಪೂಜೆ ಎನ್ನುವ ಜಲಗಾರನ ಮಾತುಗಳಲ್ಲಿ ನಾವು ಮಾಡುವ ಕೆಲಸವೇ ದೇವರು ಎಂಬುದನ್ನು ತೋರಿಸುತ್ತದೆ. ಕುವೆಂಪು ಅವರ ನಾಟಕಗಳು ಚಿಂತನೆ ಮತ್ತು ವಾಸ್ತವಿಕತೆಯನ್ನು ಋಜುವಾತು ಮಾಡುತ್ತವೆ. ಕಂದಾಚಾರ, ಅಂಧಶ್ರದ್ದೆ, ವರ್ಣಬೇದ, ಚಾತುರ್ವರ್ಣ್ಯದಂತಹ ರೋಗಳಿಗೆ ಕುವೆಂಪು ತಮ್ಮ ನಾಟಕಗಳಲ್ಲಿ ಪರಿಹಾರ ನೀಡುವ ಮೂಲಕ ಆಧುನಿಕತೆ ಮತ್ತು ಸಾಮಾಜಿಕ ನ್ಯಾಯದ ಪರಿಲ್ಪನೆಗೆ ನೀರೆರೆದಿದ್ದಾರೆ.
ಶ್ರೀರಾಮಾಯಣದರ್ಶನಂ ಈ ಯುಗದ ಮಹಾಕಾವ್ಯ. ಅದು ಭಾರತೀಯ ಸಂಸ್ಕೃತಿಯ ಧ್ಯೋತಕ, ವೇದ ಉಪನಿಷತ್ತುಗಳ ಸಾರ, ಕವಿಯ ಆಧ್ಯಾತ್ಮಕ ಸಾಧನೆಯ ಪ್ರತಿರೂಪ, ವಾಲ್ಮೀಕಿ ರಾಮಾಯಣದ ಮರುಹುಟ್ಟು, ಕೆಲವೆಡೆ ಸಾಕಷ್ಟು ಮಾರ್ಪಾಟುಗಳೂ ಕೂಡ ಆಗಿವೆ. ರಾವಣ, ಮಂಥರೆಮ ಅಹಲ್ಯೆಯರೇ ಮೋದಲಾದ ಪಾತ್ರಗಳು ಕವಿಯ ದಾರ್ಶನಿಕತೆಯ ಪ್ರಭೆಯಲ್ಲಿ ಹಳೆಯ ಪೊರೆಯನ್ನು ಕಳಚಿಕೊಂಡು ಹೊಸ ರೂಪನ್ನು ಪಡೆದಿವೆ. ವಾಲ್ಮೀಕಿ ರಾಮಾಯಣದಲ್ಲಿ ಕಾಮಾಂದನೂ, ಜಗತ್ಕಂಟಕನೂ ಹಾಗೂ ಗರ್ವಿಷ್ಠನೂ ಆಗಿದ್ದ ರಾವಣ ಶ್ರೀರಾಮಾಯಣದರ್ಶನಂ ಕೃತಿಯಲ್ಲಿ ಮಹಾವ್ಯಕ್ತಿಯಾಗಿ ಪರಿವರ್ತಿತನಾಗುತ್ತಾನೆ. ಸೀತೆ ಅವನಿಗೆ ಮಾತೃ ಸ್ವರೂಪಿಯಾಗಿ ಕಾಣುತ್ತಾಳೆ. ರಾಮನ ವನವಾಸಕ್ಕೆ ಕಾರಣೀಭೂತಳಾದ ಮಂಥರೆ ಇಲ್ಲಿ ಲೋಕಕಲ್ಯಾಣಕಾರಕಳಾಗಿ ಕಂಡುಬರುತ್ತಾಳೆ. ಕೆಟ್ಟದ್ದರಲ್ಲೂ ಕವಿ ಉದ್ದಾರವನ್ನು ಬಯಸಿದ್ದಾರೆ..
ಆಧ್ಯಾತ್ಮದ ವಿಕಾಸ ತತ್ವಗಳು ಎಲ್ಲಾ ಮಾನವರನ್ನು ಆತ್ಮದ ನೆಲೆಯಲ್ಲಿ ಸಮಾನವಾಗಿ ಪರಿಗಣಿಸುವುದಲ್ಲದೆ ಅತ್ಯೋನ್ನತಿಯ ವಿಕಾಸದ ಪರಿಭಾಷೆಯ ಸಾಧ್ಯತೆಗಳನ್ನು ತಮ್ಮ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಮನೋಜ್ಞವಾಗಿ ಚಿತ್ರಿಸಿರುವ ಕುವೆಂಪು, ಕಾದಂಬರಿಯಲ್ಲಿ ಮನಸ್ಸಿನ ಮೇಲೆ ನಿಯಂತ್ರಣವಿಲ್ಲದೆ ಬಾಡಿಗೆ ಆಸೆ ಪಡುವ, ಜೂಜಿನ ಮೋಹಕ್ಕೆ ನಿಯಂತ್ರಣವನ್ನು ಕಳೆದುಕೊಳ್ಳುವ ಬಾಡುಗಳ್ಳ ಸೋಮುವಿನ ಪಾತ್ರದ ಮೂಲಕ ಬಿಚ್ಚಿಟ್ಟಿದ್ದಾರೆ. ಇಂತಹ ದುರ್ಬಲ ಮನೋಭಾವದ ಸೋಮ ಸೆರೆದಾರ ಸೋಮಣ್ಣನಾಗಿ ಬದಲಾಗುವ ಪ್ರಕ್ರಿಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಕುವೆಂಪು ಅಷ್ಟು ಸುಲಭವಾಗಿ ನಿಲುಕುವವರಲ್ಲ. ಅವರೊಬ್ಬ ತೀವ್ರ ವಿಚಾರವಾದಿ, ಆಧ್ಯಾತ್ಮವಾದಿ. ಕುವೆಂಪು ಅವರ ಕಾವ್ಯ, ಸಾಹಿತ್ಯ ಸೃಷ್ಟಿಯ ಮುಖ್ಯ ಸೂತ್ರ ವ್ಯಕ್ತಿಯ ಆತ್ಮ ಸ್ವಾತಂತ್ರ್ಯಕ್ಕಾಗಿ ತುಡಿಯುವುದೇ ಆಗಿದೆ. ಕುವೆಂಪು ಅವರ ಕಾವ್ಯಗಳಲ್ಲಿ ಆದರ್ಶ ಮಾನವನಿದ್ದರೆ, ಅವರ ಕಥೆ-ಕಾದಂಬರಿಗಳಲ್ಲಿ ಮಾನವ ಸ್ವಭಾವ, ಮಾನವನ ಕೆಟ್ಟ ಮನೋಭಾವಗಳು, ಈ ಕಾಲಘಟ್ಟದಲ್ಲಿ ಭಾರತೀಯ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಮತ್ತು ಸ್ತ್ರಿ ವಿರೋಧಿ ಧೋರಣೆಗಳನ್ನು ಖಂಡಿಸುವ ಜೊತೆಗೆ ಅವುಗಳ ನಿಷ್ಠುರ ಚಿತ್ರಣವನ್ನು ಕಾಣಬಹುದು.
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೆ ನನ್ನದು.
ಎಂಬ ಕವನದಲ್ಲಿ ನನ್ನದೇನೂ ಇಲ್ಲ ಎಲ್ಲಾ ನಿನ್ನದೇ ಎಂಬ ಸಮರ್ಪಣೆ ಅಥವಾ ಶರಣಾಗತಿಯ ಭಾವಗಳನ್ನು ನೋಡಬಹುದು. ಜೀವನವೆಂಬ ವ್ಯಾಪಾರದ ಅನಂತತೆಗೆ ಕುವೆಂಪು ಬೆರಗಾದಂತೆ ಕಂಡು ಬರುತ್ತದೆ. ಇಡೀ ವಿಶ್ವದ ಸಾಕ್ಷಿಪ್ರಜ್ಞೆಯಂತಿರುವ ಮಹಾನ್ ಕವಿ, ವಿಶ್ವ ಮಾನವ ಸಂದೇಶದ ಮೂಲಕ ಮನುಜ ಮತ-ವಿಶ್ವಪಥ ಸಂದೇಶವನ್ನು ಕೊಡುವ ಮೂಲಕ ಸಾಮಾಜಿಕವಾಗಿ ರಾಷ್ಟ್ರದಾದ್ಯಂತ ಸೌಹಾರ್ಧತೆಯ ಬೀಜಗಳನ್ನು ಬಿತ್ತಿದರು.

ಸತ್ತಂತಿಹರನು ಬಡಿದೆಬ್ಬರಿಸು ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರಹದಲಿ ಹರಸು!
ಎನ್ನುವ ಕವಿತೆಯ ಸಾಲುಗಳಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ತವಕವಿದೆ. ಧರ್ಮಾಂಧರಾಗಿರುವವರನ್ನು, ಜಾತಿಯತೆಯನ್ನು ಓಲೈಸುವವರನ್ನು, ಅಧಿಕಾರದ ಮದದಿಂದ ಮೆರೆಯುತ್ತಿರುವ ಅಧಿಕಾರಿಗಳನ್ನು ಎಚ್ಚರಿಸುವ ಸಂಕೇತವಿದೆ. ಯಾವುದೇ ಬೇದ-ಭಾವವಿಲ್ಲದೆ ಒಟ್ಟಾಗಿ ಬಾಳುವಂತೆ ಹರಸು ಎಂಬುದು ಕವಿಯ ಕೋರಿಕೆಯಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಜಾತಿ ಜಾತಿವ್ಯವಸ್ಥೆಯಿಲ್ಲದ, ಚಾತುರ್ವರ್ಣ್ಯದಿಂದ ದೂರವಾದ ನವ ಸಮಾಜದ ನಿರ್ಮಾಣಕ್ಕಾಗಿ, ಕುವೆಂಪುರವರ ಕನಸಿನ ವಿಶ್ವ ಮಾನವತೆಯ ಸಮಾಜದ ನಿರ್ಮಾಣಕ್ಕಾಗಿ ವೈಚಾರಿಕ ನೆಲೆಗಟ್ಟಿನ ವೈಜ್ಞಾನಿಕ ಮನೋಧರ್ಮ ಮುಖ್ಯವಾಗಿ ಕಂಡು ಬರುತ್ತದೆ. ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಅವರು ತಮ್ಮ ಅಗಾಧ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಆಡುಮುಟ್ಟದ ಸೊಪ್ಪಿಲ್ಲ ಕುವೆಂಪು ಬರೆಯದ ಸಾಹಿತ್ಯವಿಲ್ಲ ಎಂಬುದು ಸಾಹಿತ್ಯ ಕ್ಷೇತ್ರದಲ್ಲಿ ಜನಜನಿತ.
ಯಾವ ಒಂದು ಗ್ರಂಥವೂ ಏಕೈಕ ಪೂಜನೀಯ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯು ತನಗೆ ಏನೆಲ್ಲಾ ಸಾಧ್ಯವೋ ಅಂತಹ ಗ್ರಂಥಗಳನ್ನೆಲ್ಲಾ ಓದಿ ತಿಳಿದು ತನ್ನ ದರ್ಶನವನ್ನು ತಾನೇ ಹೊಂದಿ ಬದುಕು ಕಟ್ಟಿಕೊಳ್ಳಬೇಕು ಎನ್ನುತ್ತಿದ್ದ ಜಗದ ಕವಿ ಒಂದು ಉತ್ತಮ ಪುಸ್ತಕ ಓದುವುದರಿಂದ ಒಬ್ಬ ಮಹಾತ್ಮನ ಸ್ನೇಹ ಸಂಗದಿಂದ ಏನೆಲ್ಲಾ ದೊರೆಯುತ್ತದೆಯೋ ಅದನ್ನೆಲ್ಲಾ ಗಳಿಸಿಕೊಳ್ಳಬಹುದು ಎನ್ನುತ್ತಿದ್ದರು.
ಯುಗದ ಕವಿ ಎನಿಸಿದ್ದ ಅವರನ್ನು ಕೇವಲ ಕವಿ ಎಂದು ಪರಿಭಾವಿಸಿದರೆ ಅದು ತಪ್ಪಾಗುತ್ತದೆ. ಅವರೊಬ್ಬ ಸಾಮಾಜಿಕ ತತ್ವಜ್ಞಾನಿ, ಶುದ್ದ ಮಾನವತಾವಾದಿ, ನಿರಂಕುಶಮತಿಗಳು ಎಲ್ಲದ್ದಕ್ಕಿಂತ ಹೆಚ್ಚಾಗಿ ವೈಜ್ಞಾನಿಕ ಕ್ರಾಂತಿಕಾರರು. ಅವರನ್ನು ತಿಳಿಯುತ್ತಾ ಹೋದಂತೆ ಅವರ ವೈಚಾರಿಕತೆ, ವೈಜ್ಞಾನಿಕತೆ ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತವೆನಿಸುತ್ತವೆ. ಕನ್ನಡ ನಾಡು ನುಡಿಗಳ ಏಳಿಗೆಗಾಗಿ ಸತತವಾದ ಹೋರಾಟ ನಡೆಸಿದ ಕುವೆಂಪು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಬೇಕು, ಅದು ಕರ್ನಾಟಕವೆಂದು ಹೆಸರಾಗಬೇಕು, ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮ ಮತ್ತು ಆಡಳಿತ ಭಾಷೆಯಾಗಬೇಕು ಎಂಬುದಾಗಿ ತಮ್ಮ ಬರಹಗಳಲ್ಲಿ ಮತ್ತು ಭಾಷಣಗಳಲ್ಲಿ ಆಶಯ ವ್ಯಕ್ತಪಡಿಸುತಿದ್ದರು.
ಕುವೆಂಪು ನಿಷ್ಠರತೆಯಿಂದ ತಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಸಿಕೊಂಡಿದ್ದೆರು. ರಾಜಕಾರಣಿಗಳು ಮತ್ತು ಮಠಾಧೀಶರುಗಳಿಂದ ಆದಷ್ಟು ಅಂತರವನ್ನು ಕಾಪಾಡಿಕೊಂಡಿದ್ದರು. ಅದೇ ರೀತಿ ಅವರು ಎಂದೂ ಪ್ರಶಸ್ತಿಗಳ ಬೆನ್ನು ಹತ್ತಿದವರಲ್ಲ. ಕುವೆಂಪು ಸಾಹಿತ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ, ಆದರೂ ಅವರ ವೈಜ್ಞಾನಿಕ ದೃಷ್ಟಿಕೋನಗಳು, ಆಧ್ಯಾತ್ಮ ನಿಲುವುಗಳು, ವಿಶ್ವ ಮಾನವ ಸಂದೇಶಗಳು ಕುರಿತು ಹೊಸದಾಗಿ ಚರ್ಚೆಗಳಾಗಬೇಕಾಗಿದೆ.
###
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346
*****