ಅನುದಿನ ಕವನ-೧೧೮ ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಗಜಲ್(ಬರಬಾರದೆ ಗೆಳತಿ)

ಗಜಲ್

ಒಲವಿನ ಓಲೆಗಳೆಲ್ಲ ಗರಿಬಿಚ್ಚಿ ನರ್ತಿಸುತಿವೆ ಬರಬಾರದೆ ಗೆಳತಿ
ಮೈಮನದ ಸುಳಿಗಳೆಲ್ಲ ವೀಣೆಯಾಗಿ ಹಾಡುತಿವೆ ಬರಬಾರದೆ ಗೆಳತಿ

ನಿನ್ನ ಕಣ್ಣ ಕಂಬನಿಯಗುಂಟ ನನ್ನೊಲವು ಜಾರಿ ಹೋದರೇನಾಯ್ತು
ಕಣ್ಣ ಪ್ರತಿ ಹನಿಗಳೂ ಪ್ರೇಮಗೀತೆಯ ಹಾಡುತಿವೆ ಬರಬಾರದೆ ಗೆಳತಿ

ಖಾಲಿಯಾದ ಜಾಮುಗಳೆಲ್ಲ ಸಾಕು ಒಡೆಯ ಎಂದು ಗೋಳಿಟ್ಟರೇನಾಯ್ತು
ನಿನ್ನ ನೆನಪಿನ ಮತ್ತಿನಲ್ಲೇ ಮನವು ತೂರಾಡುತಿದೆ ಬರಬಾರದೆ ಗೆಳತಿ

ಚುಕ್ಕಿ ಚಂದ್ರಮ ಹಸಿರು ಹೊಗರು ಕೊಸರುಗಳೆಲ್ಲ ಸವಕಲಾದರೇನಾಯ್ತು
ಪ್ರತಿ ಕ್ಷಣವೂ ನೆನಪಿನಿಂದ ಅವುಗಳ ಚೆಲವು ಹೊಸತಾಯ್ತು ಬರಬಾರದೆ ಗೆಳತಿ

ಜಗವೆಲ್ಲ ಇವನಿಗೆ ಒಲವಿನ ಹುಚ್ಚೆಂದು ಕೂಗಾಡಿದರೇನಾಯ್ತು
ಸಿದ್ಧನ ಪ್ರೀತಿ ಮಾಗಿದುದು ಅವರಿಗೇ ತಿಳಿಯದಾಯಿತು ಬರಬಾರದೆ ಗೆಳತಿ

-ಸಿದ್ಧರಾಮ ಕೂಡ್ಲಿಗಿ
*****