ನಮ್ಮಮ್ಮ….
ಕಲ್ಮಶಗಳ ನುಂಗಿ ತಿಳಿಯಾದ
ಗಟ್ಟಿ ನೆಲದ ಗಂಗೆ
ಹುಟ್ಟು ತಬ್ಬಲಿ
ಪ್ಲೇಗು…ಮಾರ್ಕ್…ಬ್ಯಾನ್ಯಾಗ
ಬೆಳೆದುಳಿದ ಹಿರಿಯಗೆ ಕಿರಿಪತ್ನಿ
ಮೂರು ಮಕ್ಕಳಲಿ
ಬದುಕುಳಿದೊಬ್ಬನಿಗಾಗಿ
ಬಂಡಿಯನೆಳೆದ ಒಂಟಿ ಎತ್ತು
ಸರ ಹೊತ್ತಿನಲ್ಲಿ ಕಚ್ಚೆಹಾಕಿ ಮುಳ್ಳುನೆಲ್ಲಿಗೆ ನೀರಾಸಿ
ಎಲೆದೋಡ.ತೊಗರಿ,ಗುರೆಳ್ಳು,ಹೆಸರು, ಸಜ್ಜೆ,ನವಣಿ.ಹುಳ್ಳಿಗಳ ನಿಗಾ ವಹಿಸಿ್ ಒಂಟಿ ಹೆಣ್ಣ ದೇಖರೇಖಿ
ಅದೆಷ್ಟು ಪಡಿಪಾಟಲಲ್ಲೂ ಬೈಲಾಟ ನೋಡಿ
ನಿಂತ ನೆಲ ಕುಸಿದಂತಾದರೂ
ಸಿಕ್ಕ ಸೌಡಿನಲ್ಲೇ ಹಾಸನೊಯ್ದದಾಕೆ
ವೈರಿಗೆಜ್ಜೆ ಬಿಡದೇ ಬಾಳೆಂದ
ಗಂಡನಭಿಮಾನದ ದಿಟ್ಟೆ
ಸವತಿಗಂಧವಾರಣೆ ಈಕೆ
ಬಂಗಾರ ಹಾಕಲಿಲ್ಲ ಪೀತಾಂಬರ ಉಡಲಿಲ್ಲ
ಕಲ್ಡಿಮಾರ್ಕ ಸೀರೆಯನುಟ್ಟು
ಆಸರಕ್ಕೊಂದು ನಡುವಿಗೆ ಬೆಳ್ಳಿಪಟ್ಡಿ
ಒಳಗೆ ಹೆಣ್ಣಾಗಿ ಹೊರಗೆ ಗಂಡಾಗಿ ಅತ್ತೀಕೆ ಸತ್ತ ಮಣುಕಕ್ಕೆ
ತಪ್ಪಿಸಿಕೊಂಡ ಮುಂಗ್ರಿಗೆ ಕರುಬಿ,ಗೊಣಗಿ,ಗುದ್ದಾಡಿ,ಛಲದಿ ನಾನೂರು ಕ್ವಿಂಟಾಲ್ ಕಡ್ಲೆಯ ಒಕ್ಕಲಗಿತ್ತಿ
ನಿಂತಿದ್ದು ಆಳ್ಮಗನಿಗೆ ಭೂಮಿ ನೊಂದಣಿಸಿ
ಆಯಗಾರರಿಗೆ ಕಾಮಧೇನುವಾಗಿ
ಸರೀಕರಿಗೆ ಸಡ್ಲು ಕೊಡದ ಕಸುವಿನೆಣ್ಣು
ರಜಾಕಾರಾವಳಿಯಲ್ಲಿ ಸಿಟ್ಟಿನಿಂದಲೇ ಹೈದರಾಬಾದ್ ನವಾಬನ ಕೊನೆಗಾಣಿಸೆಂದು ಪರಂಗೇರ ಪುಟಗೋಸಿಗಳೆಂದಾಕೆ
ನೋಟಿನಲ್ಲೇ ಗಾಂಧಿಗೆ ಚಹ ಕಾಸಿದ ನೆಹ್ರು ನೆನೆದು
ಓದಿದ್ರ ಇಂದ್ರಮ್ಮನ ಮೀರುವೆನೆಂಬಿಗುವಿನ ಕೆಚ್ಚು
ಮೈಸೂರ ಕೊನೆ ದಸರಾ ವೀಕ್ಷಕಿ ಕಲಾಪೋಷಕಿ
ಕುರುಕ್ಷೇತ್ರದ ಕೃಷ್ಣನ ಪಾತ್ರಧಾರಿ ಮಗನನ್ನು ಹತ್ತು ಹಡಿಯಾಕಿಂತ ಮುತ್ತಿನಂಥ ಮಗನಡ್ಹೆದೆನೆಂಬ ಅಗ್ಗಳಿಕೆ
ದನಗಳಿಗೆ ಉಣ್ಣಿಕಿತ್ತು ಬಾಯಲಿಲ್ಲನೆಂದ್ರು ಕೈಲಿಕೊಡೀರೆಂಬ ಸುಗ್ರೀವಾಜ್ಞೆ ನಮ್ಗೆ ಹಾಲುಹೈನ ದಾನಗೈದ ಧನ್ಯೆ ಅಪ್ಪನ ಅವ್ವ ಮೊಮ್ಮಕ್ಕಳ ನಮ್ಮಮ್ಮ
ರಾಸುಗಳಿಗೆ ಕಕ್ಕುಲತೆಯಿಂದ ಬಾಣಂತನ ಮಾಡಿ ರಾತ್ರಿ ಅಂಗಳ ಬಿಡದ ನಾಯಿಗೆ ರಾಜನೆಂದು ಬಾವುಗ ಬೆಕ್ಕು ಸಲಹಿ ಕಾಯಕದಲ್ಲಿ ಕೃಲಾಸ ಕಂಡು ಮಣ್ಣಲ್ಲೇ ಮಣ್ಣಾದಳು.
-ಡಾ.ಸುಜಾತ ಅಕ್ಕಿ, ಮೈಸೂರು