ನಮ್ಮ ಹೆಮ್ಮೆಯ ಕಾರ್ಮಿಕರು….
ಹಗಲು ಇರುಳೆನ್ನದೆ ದಿನಂಪ್ರತಿ
ತನುವ ದಣಿಸುತ ದುಡಿಯುವರು
ಕಾಯಕದಲಿ ಶ್ರಮವ ವಹಿಸುತ
ದೇಶ ಕಾಯುವ ಧೀಮಂತರಿವರು
ಎದುರಾಗುವ ಬವಣೆಯ ಸರಿಸಿಯತ್ತ
ಛಲದಲಿ ಮುಂದಡಿಯನು ಇಡುತ
ತುತ್ತಿಗೊಂದು ಹೊತ್ತು ಗೊತ್ತಿಲ್ಲದೆ
ಬಿಸಿಲು ಮಳೆಗೆ ಮೈಯೊಡ್ಡುತಿಹರು
ಸಹನೆಯಿಂದ ದುಮ್ಮಾನವ ಸಹಿಸಿ
ನಗುತ ಬದುಕನು ಕಟ್ಟಿಕೊಳ್ಳುತ
ಕನಸುಗಳ ಹಾದಿಯಲಿ ಸಾಗುತಲಿ
ಬಿಂಕ ಬಿಗುಮಾನವಿಲ್ಲದ ಸಾಹಸಿಗರು
ಪ್ರಾಣವನ್ನೇ ಹಲವೊಮ್ಮೆ ಪಣಕ್ಕಿಟ್ಟು
ನೊಂದವರಿಗೆ ಸಾಂತ್ವನ ತೋರುವರು
ಹಣೆಯ ಬರಹದ ಜಾಡಿರುವಂತೆ ಸ್ವಾರ್ಥವಿಲ್ಲದೆ ಕಂಕಣ ತೊಡುವರು
ಮೋಹದ ಕಂದಕದಲಿ ನುಸುಳದವರು
ಕಷ್ಟ ಕೋಟಲೆಯ ಹಿಮ್ಮೆಟ್ಟುತಿಹರು
ಮುರುಕು ತಡಿಕೆಯಡಿಯ
ತಾಣದಲಿ
ಬೆಂಕಿ ಬಿರುಗಾಳಿಗೆ ಬೆದರದಿಹರು
ಧರೆಯ ಮೇಲಿನ ದಿಗ್ಗಜರಿವರು
ಸಿಲುಕುತ ಮಿಡಿಯುವ
ಭಾವಜೀವಿಗಳು
ಜಾರುವ ಸಮಯದ ಮುತ್ತುಗಳಂತಿಹ
ನಮ್ಮಯ ಹೆಮ್ಮೆಯ ಕಾರ್ಮಿಕರಿವರು.
-ಡಾ. ಸೌಗಂಧಿಕಾ. ವಿ. ಜೋಯಿಸ್, ನಂಜನಗೂಡು
–
-ಡಾ. ಸೌಗಂಧಿಕಾ. ವಿ. ಜೋಯಿಸ್
*****
ತುಂಬಾ ಚೆನ್ನಾಗಿ ಮೂಡಿಬಂದಿದೆ ಕವಿತೆ ಭಾವಪೂರ್ಣ ಸಾಲುಗಳು