ಅನುದಿನ ಕವನ-೧೨೨, ಕವಿ: ಡಾ. ಶ್ರೀನಿವಾಸ ಮೂರ್ತಿ ಯು, ಕವನದ ಶೀರ್ಷಿಕೆ: ನಾನೇ ಮಹಾತ್ಮನಾಗ ಬೇಕಂತೆ

ನಾನೇ ಮಹಾತ್ಮನಾಗ ಬೇಕಂತೆ

1
ನಾನೀಗ ನೂರರ ಅಜ್ಜಿ
ದಲಿತ ಕೇರಿಗೆ ಒಮ್ಮೆ ಗಾಂಧಿ ಬಂದ
ಪೊರಕೆ ಹಿಡಿದ: ಕ್ಷಣದಲ್ಲಿ ಹೊಲಸು ಮಾಯ
ಗಾಂಧೀ ಹಿಂದೆ ಸಾವಿರದ ಜನ
ಗಾಂಧಿಗೆಂದು ಹಾಲು ತಂದೆ…….
ಅಷ್ಟರಲ್ಲಿ “ಗಾಂಧಿ” ಜನರಲ್ಲಿ ಮಾಯ.
2
ಮೊನ್ನೆ ಬೆಳಗಾಯಿತೋ ಇಲ್ಲವೋ
ಎನ್ನುವಾಗ.. ..
ಸಗಣಿ ಬಳಿಯುವ ಮಗನ ಕೈಗೆ
ನೀರು ಹಾಕುತ್ತಿದ್ದ ,,ಅಂಬೇಡ್ಕರ್.
ತನ್ನ ಕೋಟಿನಿಂದ ಕೈ ಒರಸಿ
ಹಲಗೆ-ಬಳಪ ಹಿಡಿಸಿ
ಅಕ್ಷರ ಕಲಿಸಲು ಕುಳಿತ ಕಟ್ಟೆಯ ಮೇಲೆ
ಭೀಮ ಬಂದನೆಂದು ಜನ ಬಂದರು.
ಬೆರಳು ತೋರಿಸಿ; ಸ್ವಾಭಿಮಾನಿಯಾಗು ಎಂದರು.
ಟೀ ತಂದೆ
ಅಷ್ಟರಲ್ಲಿ ಅಂಬೇಡ್ಕರ್
ಜನರಲ್ಲಿ ಕರಗಿ ಹೋದರು.
3
ಬಸವ ಕಿರೀಟ ಧರಿಸಿ ಕುದುರೆ ಏರಿ ಬಂದ
ಕಿರೀಟ-ಆಭರಣ ಕಿತ್ತೊಸೆದು
ಅಂಗೈಯಲ್ಲಿ ಲಿಂಗವಿರಸಿ
ಅಂಗವೇ ಲಿಂಗವೆಂದ.
ಮೈದಡವಿ ನೀನೆ ನನ್ನ ತಾಯಿ-ಎಂದ.
ನೂರರ ಅಜ್ಜಿಗೆ ಕಣ್ಣಂಚಲಿ ನೀರು.
ಬಸವ ಬಂದಿದ್ದಾನೆ ಕೇರಿಗೆ2….. ..ಬನ್ನಿ
ಎಂದು ಕೂಗುವಷ್ಟರಲ್ಲಿ ಜನವೋ ಜನ.
ಪಾದ ಮುಟ್ಟಲು ಬಂದವರಿಗೆ.. ಬೇಡ
ನಿಮ್ಮ ಪಾದುಕೆ ನಾ ಹೊರುವೆ _ಎಂದ.
ಜನಸಾಗರದಲ್ಲಿ ಬೆರೆತುಹೋದ ಬಸವ..
ನನಗೇಕೋ ,, ಮತ್ತೆ ಕಾಣಲಿಲ್ಲ.
ಕಲ್ಲು ಸಕ್ಕರೆ ಕೈಯಲ್ಲೇ ಕರಗಿ ಹೋಯಿತು.
4
ಬುದ್ಧ ಬಂದ …….ಇನ್ನೂ ಬದಲಾಗಲಿಲ್ಲವೆಂದು ಕೊರಗಿದ
ಸ್ಪರ್ಷದಿಂದಲೇ ಮೋಕ್ಷಕೊಟ್ಟ.
ಹೆಣ್ಣು-ಗಂಡು ಭೇಧವಳಿದ.
ವೈಚಾರಿಕತೆಯ ಗಾಳಿ ಬೀಸಿದ
ಕಣ್ಣು ಬಂದಂತಾಯಿತು.
ಬಾಗಿದ ಬೆನ್ನು ನೆಟ್ಟಗಾಗಿ
ಜನರೆಡೆಗೆ ನೋಡಿದೆ
ನೂರಾರು ಜನರ ಕಣ್ಣಲ್ಲಿ ಬುದ್ಧ ಬೆಳಕಾಗಿ ಹೋದ.
5
ಕೇರಿಯ ಗೋಳು ನೋಡಿಯೋ ?!
ಏಕೋ-ಏನೋ ನೆನಪಾಗಿ.. ಇಂದು
ಮೊಮ್ಮಗನನ್ನು ಕೇಳಿದೆ..ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್
ಮತ್ತೆ ಬರಲಿಲ್ಲ ಏಕೆ ಎಂದು
ಅಜ್ಜೀ.. .. ….. ..
ಪ್ರತಿ ನಿತ್ಯ ಬರುತ್ತಾರೆ ಶಾಲೆಗೆ
ಮಾತನಾಡಿಸುತ್ತಾರೆ..-ಎಂದ.
ಹೌದಾ,, ಎಂದು ಹೌಹಾರಿ ,.. ಬರಹೇಳು-ಎಂದೆ.
ಮರುದಿನ ಶಾಲೆಯಿಂದ ಓಡಿಬಂದವನೆ
ಏದುಸಿರು ಬಿಡುತ್ತಾ ಹೇಳಿದ ಇನ್ನು ಮುಂದೆ
ಬುದ್ಧ-ಬಸವ-ಗಾಂಧಿ- ಅಂಬೇಡ್ಕರ್ ಎಲ್ಲಾ
ನಾನೇ ಆಗಬೇಕಂತೆ,
ನಾನೇ ಆಗಬೇಕಂತೆ.

-ಡಾ.ಯು.ಶ್ರೀನಿವಾಸ ಮೂರ್ತಿ.
ಬಳ್ಳಾರಿ.

ಫೋನ್ ನಂ: 9731063950