ಅನುದಿನ‌ಕವನ-೧೨೩, ಕವಯತ್ರಿ: ರತ್ನ ಎಂ ಅಂಗಡಿ, ಹುಬ್ಬಳ್ಳಿ, ಕವನದ ಶೀರ್ಷಿಕೆ: ಅವ್ವ- ಗಿಜಗುಡುವ ನೆನಪಿನ ಸಂತೆ!

ಅವ್ವ- ಗಿಜಗುಡುವ ನೆನಪಿನ ಸಂತೆ !!
*****

ಅವ್ವ ಒಳಗೊಳಗೆ ಕಷ್ಟಗಳ ನಿಗಿನಿಗಿ ಕೆಂಡ
ಮೇಲ್ಗಡೆ ಬೆಳದಿಂಗಳ ನಗುವ ಮುಖವಾಡ
ಅವ್ವನ ಎದೆಗೂಡಿಗೆ ಕಷ್ಟಗಳ ಕಾಮೋ೯ಡ
ಬದುಕಿನದ್ದುಕ್ಕೂ ಆಗಲಿಲ್ಲಾ ಸುಖದ ಪವಾಡ!!

ಕಷ್ಟಗಳ ಕಂಡಾಪಟ್ಟಿ ನುಂಗಿ ಹೊರ ನಕ್ಕವಳು
ನೋವುಗಳ ಹೇಳದೆ ಒಡಲಾಳದಿ ಬಿಕ್ಕದವಳು
ಗಾಣದ ಎತ್ತಿನಂತೆ ಹಗಲಿರುಳು ದುಡಿದವಳು
ಮಕ್ಕಳ ಏಳ್ಗೆಗೆ ಶ್ರೀಗಂಧದಂತೆ ಜೀವ ತೇದಳು

ಅವ್ವನ ನೆನಪೆಂದರೆ ಹೊಂಗೆ ನೆರಳಂತೆ
ನನ್ನದೆ ಗಿಜುಗುಡವ ನೆನಪುಗಳು ಸಂತೆ
ಮಮತೆ ವಾತ್ಸಲ್ಯ ಹೊನಲಿನ ಮಡಿಲು
ತುತ್ತುನಿಟ್ಟು ಬೆಳಸಿದ ಅಮೃತದ ಕಡಲು

ಕುಟಂಬಕೆ ಸುರಿದಳು ಪ್ರೀತಿಯ ಹಾಲ್ಜೇನು
ಮಕ್ಕಳ ಪಾಲಿಗೆ ದೇವರಂತೆ ಕಾಮಧೇನು
ಮೌಢ್ಯ ನಂಬಲಿಲ್ಲ ಬಸವ ತತ್ವ ಪಾಲಿಸಿದಳು
ನಿಸ್ವಾರ್ಥ ದೀಪ್ತಿ ಬೆಳಕಂತೆ ಬಾಳಿದವಳು.

-ರತ್ನಾ ಎಂ ಅಂಗಡಿ ✍ ಹುಬ್ಬಳ್ಳಿ