ಬಳ್ಳಾರಿ: ಒಂದು ಸಾವಿರ ಆಕ್ಸಿಜನ್ ಹಾಸಿಗೆ ಹೊಂದಿರುವ ತಾತ್ಕಾಲಿಕ ಆಸ್ಪತ್ರೆಯು ಮುಂದಿನ ಹದಿನೈದು ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ತೋರಣಗಲ್ಲು ಸಮೀಪದ ಜಿಂದಾಲ್ ಕಾರ್ಖಾನರ ಎದುರುಗಡೆ ನಿರ್ಮಾಣವಾಗುತ್ತಿರುವ ಸಾವಿರ ಆಕ್ಸಿಜನ್ ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
265 ಹಾಸಿಗೆಯುಳ್ಳ ಒಂದು ಘಟಕ ಇನ್ನು ಎರಡು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಇದರ ಜೊತೆಗೆ 15 ದಿನಗಳಲ್ಲಿ ಸಂಪೂರ್ಣ ಆಸ್ಪತ್ರೆ ಜನರ ಉಪಯೋಗಕ್ಕೆ ಬರಲಿದೆ. ಎಂದರು.
ದ ರಾಜ್ಯದಲ್ಲಿ ಆಕ್ಸಿಜನ್ ಬೆಡ್ ಗಾಗಿ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬಳ್ಳಾರಿಯಲ್ಲಿ ನಿರ್ಮಾಣವಾಗುತ್ತಿರುವ ಸಾವಿರಬೆಡ್ ಗಳ ಆಸ್ಪತ್ರೆಯಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ರಾಯಚೂರು,ಕೊಪ್ಪಳ,ಚಿತ್ರದುರ್ಗ ಜಿಲ್ಲೆಗಳಿಗೂ ಅನುಕೂಲವಾಗಲಿದೆ ಎಂದರು.
ಅವಳಿ ಜಿಲ್ಲೆಯ ಜನರು ಬೆಡ್ ಸಿಗುತ್ತಿಲ್ಲ ಎಂದು ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆಯಿಲ್ಲ. ಜಿಲ್ಲಾಡಳಿತ ಮತ್ತು ಜಿಂದಾಲ್ ಸಂಸ್ಥೆಯ ಸಹಯೋಗದ ಈ ಕಾರ್ಯ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.
ಮೂಲಭೂತ ಸೌಕರ್ಯ, ಹಜ್ ಮತ್ತು ವಕ್ಫ್ ಸಚಿವರೂ ಆಗಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಅವರು ಮಾತನಾಡಿ,ಆಕ್ಸಿಜನ್ ಕೊರತೆ ಹಾಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಜಿಂದಾಲ್ ಸಂಸ್ಥೆ ತನ್ನ ಉತ್ಪಾದನಾ ಘಟಕದ ಸಮೀಪವೇ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಆಕ್ಸಿಜನ್ ಹಾಸಿಗೆಯಿಲ್ಲದೆ ಜನರು ಸಂಕಷ್ಟವನ್ನು ಅನುಭವಿಸುತ್ತಿರುವ ಸಂಕಷ್ಟದ ಸಮಯದಲ್ಲಿ ಸಾವಿರ ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲು ಹೊರಟಿರುವ ಜಿಂದಾಲ್ ಕಂಪನಿಗೆ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸೇರಿದಂತೆ ಜಿಂದಾಲ್ ಸಂಸ್ಥೆಯ ಅಧಿಕಾರಿಗಳು ಇದ್ದರು.
*****